ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಮಗಳು ಜಾನಕಿಯಲ್ಲಿ ಸಿಎಸ್ಪಿ ತಂಗಿ ಶ್ಯಾಮಲಳಾಗಿ ನಟಿಸುತ್ತಿರುವ ಸುಧಾ ಬೆಳವಾಡಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಸಕ್ರಿಯವಾಗಿರುವ ಸುಧಾ ಬೆಳವಾಡಿ, ಮೇಕಪ್ ಅಣಿ ಮತ್ತು ಭಾರ್ಗವಿ ನಾರಾಯಣ್ ದಂಪತಿ ಪುತ್ರಿ.
ರಕ್ತಗತವಾಗಿ ಬಂದಿರುವ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸುಧಾ ಬೆಳವಾಡಿ ನಾಟಕಗಳಲ್ಲಿ ನಟಿಸುವ ಮೂಲಕ ನಟನಾ ಪಯಣ ಶುರು ಮಾಡಿದರು. ಮುನ್ನೂರರಿಂದ ನಾನೂರು ನಾಟಕಗಳಲ್ಲಿ ಅಭಿನಯಿಸಿರುವ ಸುಧಾ ಬೆಳವಾಡಿ ಬೆಳ್ಳಿತೆರೆಗೆ ಬಂದಿದ್ದು ಬಾಲನಟಿಯಾಗಿ. ಕಾಡು ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಇವರು ಮುಂದೆ ಭೂತಯ್ಯನ ಮಗ ಅಯ್ಯು ಸಿನಿಮಾದಲ್ಲಿ ಅಯ್ಯು ಮಗಳಾಗಿ ನಟಿಸಿ, ಪಿ.ಲಂಕೇಶ್ ಅವರ ಪಲ್ಲವಿ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.
ಮುಂದೆ ವಿದ್ಯಾಭ್ಯಾಸ, ಮದುವೆ, ಮಕ್ಕಳು ಎಂದು ಬರೋಬ್ಬರಿ ಎಂಟು ವರುಷಗಳ ಕಾಲ ಬಣ್ಣದ ಲೋಕದಿಂದ ದೂರವಿದ್ದ ಸುಧಾ, ತಾಯಿ ಸಾಹೇಬದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಟಿ.ಎನ್.ಸೀತಾರಾಮ್ ನಿರ್ದೇಶನದ ಮತದಾನದಲ್ಲೂ ನಟಿಸಿರುವ ಇವರು ಮುಂದೆ ಗರ್ವ, ಮನ್ವಂತರ, ಮಂಥನ, ಮನೆಯೊಂದು ಮೂರು ಬಾಗಿಲು, ಶುಭಮಂಗಳ, ಯಾವ ಜನ್ಮದ ಮೈತ್ರಿ, ಮಹಾಪರ್ವ, ಶ್ರೀರಸ್ತು ಶುಭಮಸ್ತು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಸದ್ಯ ಇವರು ಕಿರುತೆರೆ ಪ್ರಿಯರ ಪಾಲಿನ ಪ್ರೀತಿಯ ಶ್ಯಾಮಲಾ ಅತ್ತೆ.
ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲೂ ಕಮಾಲ್ ಮಾಡಿರುವ ಸುಧಾ ಬೆಳವಾಡಿ, ಎಪ್ಪತ್ತರಿಂದ ಎಂಭತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಜೊತೆಗೆ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ಮಿಂಚಿದ್ದಾರೆ ಈ ಶ್ಯಾಮಲತ್ತೆ. ಕೆನರಾ ಬ್ಯಾಂಕ್, ಸಿಂಥಾಲ್ ಸೋಪು, ಜಿ.ಆರ್.ಟಿ ರಸಗುಲ್ಲಾ, ಜಿ.ಆರ್.ಟಿ ಜ್ಯೂವೆಲರ್ಸ್ ಹೀಗೆ ಬೆರಳೆಣಿಕೆಯಷ್ಟು ಜಾಹೀರಾತುಗಳಲ್ಲಿ ಸುಧಾ ಕಾಣಿಸಿಕೊಂಡಿದ್ದಾರೆ.
ನಟನೆಯೇ ನನ್ನ ಬದುಕು ಎಂದು ಹೇಳುವ ಸುಧಾ ಬೆಳವಾಡಿ ಅವರಿಗೆ ಇಂದು ಜನುಮದಿನದ ಸಂಭ್ರಮ.