ಕ್ಯಾಲಿಫೋರ್ನಿಯಾ:ಇಲ್ಲಿನ ಸೇಂಟ್ ಜಾನ್ಸ್ ಹೆಲ್ತ್ ಸೆಂಟರ್ನಲ್ಲಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ರಾಕ್ ಗ್ರೂಪ್ ವ್ಯಾನ್ ಹ್ಯಾಲೆನ್ನ ಪ್ರಸಿದ್ಧ ಗಿಟಾರಿಸ್ಟ್ ಎಡ್ಡಿ ವ್ಯಾನ್ ಹ್ಯಾಲೆನ್ ಸಾವನ್ನಪ್ಪಿದ್ದಾರೆ.
‘ಕ್ಯಾನ್ಸರ್ನೊಂದಿಗೆ ಹೊರಾಡಿ ನಮ್ಮ ತಂದೆ ಸಾವನ್ನಪ್ಪಿದ್ದಾರೆ. ಅವರು ನನಗೆ ಅತ್ಯುತ್ತಮ ತಂದೆ. ನನ್ನ ತಂದೆಯ ಸಾವಿನ ಸುದ್ದಿ ಕೇಳಿದ ನನಗೆ ಹೃದಯ ಒಡೆದಂತಾಗಿದೆ. ಈ ನೋವಿನಿಂದ ನಾನು ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಮಗ ವುಲ್ಫ್ ವ್ಯಾನ್ ಹ್ಯಾಲೆನ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿದ್ದಾರೆ.
ಹದಿಹರೆಯದ ವಯಸ್ಸಿನಿಂದಲೇ ತನ್ನ ಸಹೋದರ ಅಲೆಕ್ಸ್ ವ್ಯಾನ್ ಹ್ಯಾಲೆನ್ ಜೊತೆಗೂಡಿ ಎಡ್ವರ್ಡ್ ಲೋಡ್ವಿಜ್ ವ್ಯಾನ್ ಹ್ಯಾಲೆನ್ ಗಿಟಾರ್ ಆಲ್ಬಂಗಳನ್ನು ರಚಿಸಲು ಶುರು ಮಾಡಿದರು. ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 65 ವರ್ಷದ ಎಡ್ಡಿ ವ್ಯಾನ್ ಹ್ಯಾಲೆನ್ 4 ದಶಕಗಳಲ್ಲಿ 12ಕ್ಕೂ ಹೆಚ್ಚು ಆಲ್ಬಂಗಳನ್ನು ರಚಿಸಿ ಜನಪ್ರಿಯಗೊಂಡರು.
ಇನ್ನು ಎಡ್ಡಿ ವ್ಯಾನ್ ಹ್ಯಾಲೆನ್ ತಮ್ಮ ಗಿಟಾರ್ನಿಂದ ಲಕ್ಷಾಂತರ ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸಿದ್ಧಾರೆ. ಮೈಕಲ್ ಜಾಕ್ಸನ್ನ ‘ಬಿಟ್ ಇಟ್’ ಆಲ್ಬಂಗೆ ಎಡ್ಡಿ ವ್ಯಾನ್ ಹ್ಯಾಲೆನ್ ಗಿಟಾರ್ ನುಡಿಸಿದ್ದರು. ಈ ಆಲ್ಬಂ ಬಹಳ ಜನಪ್ರಿಯಗೊಂಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಎಡ್ಡಿ ವ್ಯಾನ್ ಹ್ಯಾಲೆನ್ ಸಾವಿನ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ಗಿಟಾರ್ ಮಾಂತ್ರಿಕ ಎಡ್ಡಿ ವ್ಯಾನ್ ಹ್ಯಾಲೆನ್ ಕಳೆದುಕೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.