ಮೇ 31 ಕ್ಕೆ 4ನೇ ಹಂತದ ಲಾಕ್ಡೌನ್ ಅಂತ್ಯವಾಗಲಿದೆ. ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡುವಂತೆ ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್ ಹೇಳಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಗುಬ್ಬಿ ಜೈರಾಜ್, ಲಾಕ್ಡೌನ್ ಆರಂಭವಾದಾಗಿನಿಂದಲೂ ಚಿತ್ರರಂಗ ಸಾಕಷ್ಟು ನಷ್ಟ ಅನುಭವಿಸಿದೆ. ಜೂನ್ 1 ರಿಂದ ರಾಜ್ಯದಲ್ಲಿ ವ್ಯಾಪಾರ, ವ್ಯವಹಾರಕ್ಕೆ ಸರ್ಕಾರ ಮತ್ತಷ್ಟು ಅನುವು ಮಾಡಿಕೊಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ನಿರ್ಮಾಪಕರ ಸಂಘ, ವಿತರಕರು, ಪ್ರದರ್ಶಕರ ಸಂಘದೊಂದಿಗೆ ನಾನು ಮುಖ್ಯಮಂತ್ರಿಗಳನ್ನು ನಾಳೆ ಭೇಟಿ ಮಾಡಿ ಥಿಯೇಟರ್ ತೆರೆಯಲು, ಸಿನಿಮಾ ಒಳಾಂಗಣ-ಹೊರಾಂಗಣ ಶೂಟಿಂಗ್ ನಡೆಸುವುದು ಸೇರಿದಂತೆ ಚಿತ್ರರಂಗದ ಎಲ್ಲಾ ಚಟುವಟಿಕೆಗಳಿಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.