ಸ್ಯಾಂಡಲ್ವುಡ್ನ ಸ್ಟಾರ್ ನಟರು ಹಲವು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಬಡ ಮಕ್ಕಳಿಗೆ ವಿದ್ಯಾಭ್ಯಾಸ, ವೈದ್ಯಕೀಯ ಚಿಕಿತ್ಸೆ, ಶಾಲೆಗಳ ದತ್ತು ಪಡೆಯುವಿಕೆ ಹೀಗೆ ಅನೇಕ ಕಾರ್ಯಗಳ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇನ್ನು ಈ ಸಾಲಿಗೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸೇರಿಕೊಂಡಿದ್ದಾರೆ.
ಹೌದು...ಡೈನಾಮಿಕ್ ಪ್ರಿನ್ಸ್ ಅಳಿವಿನಂಚಿನಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು, ಈ ವಿಷಯವನ್ನು ಅವರೆ ಖಚಿತ ಪಡಿಸಿದ್ದಾರೆ. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ದಡಸ್ ಗ್ರಾಮದ ಸರ್ಕಾರಿ ಶಾಲೆಯೊಂದನ್ನು ಪ್ರಜ್ವಲ್ ದತ್ತು ಪಡೆದಿದ್ದಾರಂತೆ. ಈ ಯೋಚನೆ ಹಿಂದೆಯೇ ಇದ್ದಿದ್ದು, ಅದನ್ನು ಜಾರಿಗೆ ತರಲು ಅವರಿಗೆ ಸಾಧ್ಯವಾಗಿರಲಿಲ್ಲವಂತೆ. ಆದರೆ ಪ್ರಜ್ವಲ್ ಸೇವ್ ಗೌರ್ನಮೆಂಟ್ ಸ್ಕೂಲ್ ಎಂಬ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅದರ ನೋಡಿಕೊಳ್ಳುವ ಜವಾಬ್ದಾರಿಯನ್ನು ತಮ್ಮ ಸ್ನೇಹಿತರಿಗೆ ನೀಡಿದ್ದಾರೆ.