ಬೆಂಗಳೂರು:ಕಳೆದ ಮೂರು ತಿಂಗಳಿಂದ ಸಂಕಷ್ಟದಲ್ಲಿರುವ ಚಿತ್ರರಂಗದ ಚೇತರಿಕೆ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು ಎಂದು ನಿರ್ಮಾಪಕ ಸಾ.ರಾ.ಗೋವಿಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೊಸ ಚಿತ್ರಗಳ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಲಿ: ಸಾ.ರಾ.ಗೋವಿಂದು ವಾಣಿಜ್ಯ ಮಂಡಳಿಯಲ್ಲಿ ಮಾತನಾಡಿದ ಅವರು, ಸರ್ಕಾರ ಚಿತ್ರರಂಗದ ಕಷ್ಟವನ್ನು ಅರ್ಥ ಮಾಡಿಕೊಂಡು, ಅರ್ಧಕ್ಕೆ ನಿಂತ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಇದಕ್ಕೆ ಚಿತ್ರರಂಗದ ಪರವಾಗಿ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ಆದರೆ ಇದರ ಜೊತೆಗೆ ಸರ್ಕಾರ ಚಿತ್ರರಂಗದ ಇನ್ನೊಂದು ಭಾಗವನ್ನು ನೋಡಬೇಕು. ಹೊಸ ಚಿತ್ರಗಳು ಶುರುವಾಗದೇ ಹೋದರೆ ಮತ್ತೆ ಕಾರ್ಮಿಕರಿಗೆ, ತಂತ್ರಜ್ಞರಿಗೆ ತೊಂದರೆ ಆಗಲಿದೆ. ಹಾಗಾಗಿ ಸರ್ಕಾರ ಈಗ ನಿಂತಿರುವ ಚಿತ್ರಗಳಿಗೆ ಅನುಮತಿ ನೀಡಿದಂತೆ ಹೊಸ ಚಿತ್ರಗಳಿಗೂ ಅನುಮತಿ ನೀಡಬೇಕು ಎಂದರು.
ಸರ್ಕಾರ ವಿಧಿಸುವ ಎಲ್ಲಾ ಷರತ್ತುಗಳನ್ನು ಪಾಲಿಸಿ ಚಿತ್ರೀಕರಣ ಮಾಡುತ್ತೇವೆ. ಆದ್ದರಿಂದ ಸರ್ಕಾರ ಕೂಡಲೇ ಹೊಸ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು ಎಂದು ಸಾ.ರಾ.ಗೋವಿಂದು ಸರ್ಕಾರಕ್ಕೆ ಮನವಿ ಮಾಡಿದರು. ಆದರೆ ಸದ್ಯಕ್ಕೆ ಚಿತ್ರಮಂದಿರಗಳನ್ನು ತೆರೆಯುವುದು ಕಷ್ಟದ ಕೆಲಸ. ಯಾಕೆಂದರೆ ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ ಎಂದರು.
ಒಂದು ವೇಳೆ 600 ಸೀಟ್ಗಳಿರುವ ಚಿತ್ರಮಂದಿರಗಳಲ್ಲಿ 300 ಜನರಿಗೆ ಸಿನಿಮಾ ನೋಡಲು ಅವಕಾಶ ಕೊಟ್ಟರೆ ಚಿತ್ರಮಂದಿರಗಳ ಮಾಲೀಕರಿಗೆ ನಷ್ಟ, ಅಲ್ಲದೆ ಚಿತ್ರಮಂದಿರಗಳನ್ನು ತೆರೆಯುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಆದ್ದರಿಂದ ಸದ್ಯಕ್ಕೆ ರಾಜ್ಯ ಸರ್ಕಾರ ಹೊಸ ಚಿತ್ರಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಮಾಪಕ ಸಾ.ರಾ.ಗೋವಿಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.