ಈ ಸಿನಿಮಾ ಎಂಬ ಮಾಯಾಲೋಕದಲ್ಲಿ ಏನಾದರೂ ಸಾಧಿಸಬೇಕು ಎಂಬ ಆಸೆ ಹೊತ್ತು ಬರುವ ಹೊಸ ಪ್ರತಿಭೆಗಳಿಗೆ ಬೃಹತ್ ವೇದಿಕೆಯೊಂದು ಹುಟ್ಟಿಕೊಂಡಿದೆ. ಚಾಮುಂಡೇಶ್ವರಿ ಸ್ಟುಡಿಯೋ ಕಳೆದ 50 ವರ್ಷಗಳಿಂದ ಕನ್ನಡ ಸಿನಿಮಾರಂಗಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಇದೀಗ ಇದೇ ಸ್ಟುಡಿಯೋ 5 ದಶಕ ಪೂರೈಸಿದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಕ್ಕೆ ಇಳಿದಿದೆ. ಚಾಮುಂಡೇಶ್ವರಿ ಸ್ಟುಡಿಯೋ ಸಹಕಾರದೊಂದಿಗೆ, ಸಿನಿಮಾ ಸಂಸ್ಥೆ ರೂಪಿಸಿರುವ ಯೋಜನೆಯೇ ಪ್ರತಿಭಾ ಸಂಪದ.
ಒಂದು ಚಿತ್ರ ನಿರ್ಮಾಣಕ್ಕೆ ಕಲಾವಿದರು, ತಂತ್ರಜ್ಞರು, ಸಂಸ್ಥೆಗಳು ಎಲ್ಲರೂ ಬೇಕು. ಈ ಎಲ್ಲಾ ವಲಯದಲ್ಲಿ ವಿನೂತನ ಪ್ರತಿಭೆಗಳನ್ನು ಗುರುತಿಸಿ, ಚಿತ್ರ ಜಗತ್ತಿಗೆ ಅವರನ್ನು ಪರಿಚಯಿಸುವ ಕಾರ್ಯಕ್ರಮ ಇದು. ಈ ಸಿನಿಮಾ ಸಂಸ್ಥೆ 100 ಕಿರುಚಿತ್ರಗಳನ್ನು ನಿರ್ಮಿಸಲು ಯೋಜಿಸಿದೆ. ಈ ಯೋಜನೆಗೆ ಯಶಸ್ವಿ 50ನೇ ವರ್ಷಾಚರಣೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋ ಸಕಲ ರೀತಿಯಲ್ಲಿ ನೆರವು ನೀಡಲು ಕೈ ಜೋಡಿಸಿದೆ ಎಂದು ಸಿನಿಘಮದ ಮುಖ್ಯಸ್ಥ ಎಂ.ಎಲ್ ಪ್ರಸನ್ನ ತಿಳಿಸಿದರು. ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "100 ಕಿರುಚಿತ್ರಗಳಲ್ಲಿ 10 ಕಿರುಚಿತ್ರಗಳನ್ನು ಕನ್ನಡದ ಹೆಸರಾಂತ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಆ ಮೂಲಕ ಹೊಸಬರಿಗೆ ಉಳಿದ 90 ಕಿರುಚಿತ್ರಗಳನ್ನು ನಿರ್ಮಿಸಲು 45 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಂಡಕ್ಕೆ 2 ಕಿರುಚಿತ್ರದ ಜವಾಬ್ದಾರಿ ನೀಡಲಾಗುತ್ತದೆ. ಅದರಲ್ಲೊಂದು ಮನರಂಜನಿಯವಾದರೆ, ಇನ್ನೊಂದು ಮನಮುಟ್ಟುವಂಥ ಪ್ರೀತಿ, ಸಹನೆ, ಸಾಮಾಜಿಕ ತಲ್ಲಣದಂಥ ಕತೆಯನ್ನು ಆಯ್ದುಕೊಳ್ಳಬೇಕು. 100 ಕಿರುಚಿತ್ರಗಳಲ್ಲಿ ಆಯ್ದ 60 ಕಿರುಚಿತ್ರಗಳು ಜುಲೈ ಕೊನೆಯ ವಾರದಲ್ಲಿ 6 ದಿನಗಳ ಕಾಲ ಪ್ರದರ್ಶಿಸಲಾಗುವುದು. ಚಿತ್ರರಂಗದ ಗಣ್ಯರು ಕಿರುಚಿತ್ರೋತ್ಸವದಲ್ಲಿ ಭಾಗವಹಿಸಿಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಆಯ್ದ 10 ತಂಡಗಳಿಗೆ ಚಲನಚಿತ್ರ ನಿರ್ಮಾಣದ ಘೋಷಣೆ ಮಾಡಲಾಗುತ್ತದೆ. ಹಾಗಾಗಿ ಸಿನಿಘಮ ಜಾಲತಾಣದಲ್ಲಿ ಈಗಲೇ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಪ್ರಸನ್ನ ತಿಳಿಸಿದ್ದಾರೆ.