ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಕನ್ನಡ ಚಿತ್ರರಂಗ ದುಃಸ್ಥಿತಿಯಲ್ಲಿದೆ. ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ.
ಕಳೆದ ವರ್ಷ ಕೊರೊನಾ ಬಂದಾಗಿನಿಂದಲೂ ಸಂಬಂಧಪಟ್ಟ ಅಧಿಕಾರಿಗಳು, ಡಿಸಿ, ಕಮಿಷನರ್ನ್ನ ಭೇಟಿಯಾಗುತ್ತಲೇ ಇದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್, ರಾಜ್ಯ ಸರ್ಕಾರಕ್ಕೆ ವಿಡಿಯೋ ಮೂಲಕ ಸಮಸ್ಯೆ ಹೇಳಿಕೊಂಡಿದ್ದಾರೆ.
ಕಳೆದ ಬಾರಿಯೂ ಯಾವುದೇ ಪ್ಯಾಕೇಜ್ನಲ್ಲಿ ನಮ್ಮ ವರ್ಗವನ್ನು ಪರಿಗಣಿಸಿಲ್ಲ. ಈ ಬಾರಿಯ ಪ್ಯಾಕೇಜ್ನಲ್ಲೂ ನಮ್ಮ ನಿರ್ದೇಶಕರನ್ನು ಹಾಗೂ ತಂತ್ರಜ್ಞರನ್ನು ಪರಿಗಣಿಸಿಲ್ಲ. ಕನ್ನಡ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ನೀವು ಕಾಪಾಡಬೇಕಾಗಿದೆ. ಇದು ಸರ್ಕಾರದ ಹೊಣೆ ಎಂದಿದ್ದಾರೆ.