ಗಿರೀಶ ಕಾಸರವಳ್ಳಿ ನಿರ್ದೇಶನದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರಕ್ಕೆ ಜರ್ಮನಿಯ ಸ್ಟುಟ್‌ಗಾರ್ಟ್ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ (ಡೈರೆಕ್ಟರ್ಸ್ ವಿಷನ್ ಅವಾರ್ಡ್) ದೊರೆತಿದೆ.
ಕನ್ನಡ ಚಿತ್ರರಂಗದ ನಿರ್ಮಾಪಕ ಎಸ್. ವಿ. ಶಿವಕುಮಾರ್ ತಮ್ಮ ಸಂಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರವು ಬಹುಮುಖ ಪ್ರತಿಭೆಯ ಕವಿ, ಸಾಹಿತಿ, ನಾಟಕಕಾರ, ಜನಪ್ರಿಯ ಗೀತ ರಚನೆಕಾರ ಜಯಂತ ಕಾಯ್ಕಿಣಿಯವರ ‘ಹಾಲಿನ ಮೀಸೆ’ ಕಥೆಯನ್ನು ಆಧರಿಸಿದೆ.
ಆ ಕಥೆಯಲ್ಲಿ ಬರುವ ಪಾತ್ರವೊಂದನ್ನು ಬೆಳೆಸಿ ಸಮಕಾಲೀನ ಸಾಮಾಜಿಕ ಜ್ವಲಂತ ದ್ವಂದ್ವವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ದಾಸಶ್ರೇಷ್ಠ ಪುರಂದರ ದಾಸರ ಹಾಡೊಂದರ ಶೀರ್ಷಿಕೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಈ ದ್ವಂದ್ವವನ್ನು ಅತ್ಯಂತ ಮಾರ್ಮಿಕವಾಗಿ ಈ ಸಿನಿಮಾ ಸೂಚಿಸುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ನಮ್ಮ ಪಯಣ ಮನಃಶಾತಿಗೆ ಎರವಾಗುತ್ತಿದೆಯೇ ಅನ್ನುವ ಈ ದಾಸರ ಪದದಲ್ಲಿ ವ್ಯಕ್ತವಾಗುವ ಆತಂಕ ಚಿತ್ರದ ಸತ್ವವಾಗಿದೆ.
ಬಾಲ್ಯದ ಹಳ್ಳಿಯ ವಾತಾವರಣ ತನ್ನ ಬೆಳವಣಿಗೆಗೆ ತೊಡಕಾಗಿದೆ ಎಂದು ಭಾವಿಸುವ ನಾಗರಾಜ ಸ್ಥಳಾಂತರವಾಗುವ ಕನಸು ಕಾಣುತ್ತಿರುತ್ತಾನೆ. ನಂತರ ದೊಡ್ಡವನಾಗಿ ನಗರ ಸೇರಿ ಗೃಹಸ್ಥನಾದ ನಾಗರಾಜ ಜೀವನದಲ್ಲಿ ಯಶಸ್ವಿಯಾಗುತ್ತಾ ಹೋದಂತೆ ಭವಜೀವನದ ಆಕರ್ಷಣೆ ಅವನನ್ನು ಬೇರೆಯೇ ವ್ಯಕ್ತಿಯನ್ನಾಗಿ ರೂಪಿಸುತ್ತದೆ. ಬಾಲ್ಯದಲ್ಲಿ ಅವನುಂಡ ಅವಮಾನ, ನೋವು ಅವನ ಮನಸ್ಸನ್ನು ಹದಗೊಳಿಸಿತೇ? ಅಥವಾ ಅದು ಅವನನ್ನು ಅಸೂಕ್ಷ್ಮ ಮಾಡಿತೇ? ಎಂಬ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ.
ಗಿರೀಶ ಕಾಸರವಳ್ಳಿಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ 60ರ ದಶಕದ ಕನಸು ಮತ್ತು ಈ ಕಾಲದ ಅಂದರೆ, ಈ ಹೊಸ ಶತಮಾನದ ತಳಮಳ ಇವೆರೆಡೂ ಕಥಾನಾಯಕನ ಮನೋಗತಿಯನ್ನು ರೂಪಿಸುತ್ತಿರುವ ನೆಲೆಗಳು. ಕಾಲಘಟ್ಟ ಭಿನ್ನವಾದಂತೆ ಪರಿಸರವೂ ಬದಲಾಗುತ್ತದೆ. ಹಳ್ಳಿಯ ಪರಸರದಲ್ಲಿ ಬಾಲ್ಯ ಅನಾವರಣಗೊಂಡರೆ ಬೆಂಗಳೂರಿನ ಮೆಟ್ರೋಪಾಲಿಟನ್ ಪರಿಸರದಲ್ಲಿ ಬೆಳೆದ ನಾಗರಾಜ ನೆಲೆಕಂಡ ತಾಣವಾಗಿದೆ. ಸ್ಥಳ ಬದಲಾಗಿದೆ. ಕಾಲ ಬದಲಾಗಿದೆ.
ದ್ವಂದ್ವಾತ್ಮಕ ಜೀವನದ ಬಗೆಗೆ ಬೆಳಕು: ಆದರೆ, ಮನುಷ್ಯನ ಹುಡುಕಾಟ ಅವಿರತವಾಗಿ ಮುಂದುವರೆಯುತ್ತಲೇ ಇದೆ. ಹಾಗಿದ್ದರೆ ನಾಗರಾಜನ ಹುಡುಕಾಟ ಯಾವುದಕ್ಕಾಗಿ? ಹಳ್ಳಿ ಮತ್ತು ನಗರ, ರಮಣೀಯ ನಿಸರ್ಗದ ನಡುವಿನ ಜೀವನ ಮತ್ತು ನಗರದ ಯಾಂತ್ರೀಕೃತ ಜೀವನ ಶೈಲಿ, ಪರಕೇಂದ್ರಿತ ಬದುಕು ಮತ್ತು ಸ್ವಕೇಂದ್ರಿತ ಬದುಕು. ಈ ತರಹದ ದ್ವಂದ್ವಾತ್ಮಕ ಜೀವನವಿರುವ ನಮ್ಮ ಬದುಕು ಎತ್ತ ಸಾಗಿದೆ? ಎಂಬುದನ್ನು ತಿಳಿಸುತ್ತದೆ.
ದ್ವೀಪ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಹೆಚ್. ಎಂ ರಾಮಚಂದ್ರ ಹಾಲ್ಕೆರೆ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಎಸ್.ಆರ್.ರಾಮಕೃಷ್ಣ ಸಂಗೀತವಿದೆ. ಎಸ್. ಗುಣಶೇಖರನ್ ಸಂಕಲನ ಇದ್ದು, ಅಪೂರ್ವ ಕಾಸರವಳ್ಳಿ ಜಂಟಿ ನಿರ್ದೇಶನ ಇದೆ. ಅನನ್ಯ ಕಾಸರವಳ್ಳಿ ವಸ್ತ್ರಾ ವಿನ್ಯಾಸ, ಸಾವಂತ್, ಕಿರಣ್‌ಕುಮಾರ್ ಹಾಗೂ ಯಶವಂತ ಯಾದವ್ ಅವರ ಸಹನಿರ್ದೇಶನ ಇದೆ.
ಬಾಸುಮ ಕೊಡಗು ಕಲಾನಿರ್ದೇಶನ ರಮೇಶ್ ಬಾಬು ಪ್ರಸಾಧನ ಇವೆ. ತಾಂತ್ರಿಕ ನೆರವು ಮೋಹನ್ ಕಾಮಾಕ್ಷಿಯವರದು. ಮಕ್ಕಳ ಬದುಕಿನ ಮೂಲಕ ಅನಾವರಣಗೊಳ್ಳುವ ಕಥಾಹಂದರದಲ್ಲಿ ನಾಲ್ಕು ಮಕ್ಕಳು ಹೃದಯಂಗಮವಾಗಿ ಅಭಿನಯಿಸಿದ್ದಾರೆ. ಅವರೇ ದ್ರುಶಾ ಕೊಡಗು, ಆರಾಧ್ಯ, ಪ್ರವರ್ಥರಾಜು ಮತ್ತು ನಲ್ಮೆ. ಉಳಿದ ಮುಖ್ಯ ಪಾತ್ರಗಳಲ್ಲಿ ಪವಿತ್ರ, ಮಾಲತೇಶ್. ಕೆ.ಜಿ.ಕೃಷ್ಣಮೂರ್ತಿ, ಚೆಸ್ವಾ, ರಶ್ಮಿ, ಬಿ.ಎಂ.ವೆಂಕಟೇಶ್, ಪುಷ್ಪಾ ರಾಘವೇಂದ್ರ, ಸುಜಾತ ಶೆಟ್ಟಿ ಮೊದಲಾದವರಿದ್ದಾರೆ.
10 ವರ್ಷಗಳ ನಂತರ ಪುನಃ ಕಥಾಚಿತ್ರ: ಕರಾವಳಿಯ ಬದುಕನ್ನು ಕಟ್ಟಿಕೊಡುವ ಚಿತ್ರದ ಭಾಗವನ್ನು ಉಡುಪಿಯ ಸುತ್ತಮುತ್ತಲಿನ ಪರಿಸರದಲ್ಲೂ, ನಗರ ಜೀವನದ ಘಟನಾವಳಿಗಳನ್ನು ಬೆಂಗಳೂರಿನಲ್ಲೂ ಚಿತ್ರೀಕರಿಸಲಾಗಿದೆ. 2010 ರಲ್ಲಿ ತೆರೆಕಂಡ ಬಸಂತಕುಮಾರ್ ಪಾಟೀಲ್ ನಿರ್ಮಿಸಿದ ‘ಕೂರ್ಮಾವತಾರ’ ಚಿತ್ರದ ನಂತರ ಸಾಕ್ಷ್ಯಚಿತ್ರಗಳ ನಿರ್ದೇಶನದತ್ತ ತೆರಳಿದ್ದ ಗಿರೀಶ ಕಾಸರವಳ್ಳಿಯವರು ಹತ್ತು ವರ್ಷಗಳ ನಂತರ ಪುನಃ ಕಥಾಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.
ಇದು ಅವರ 15ನೇ ಕಥಾಚಿತ್ರ. ಹಾಗೆಯೇ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸುತ್ತಾ ಬಂದಿರುವ ನಿರ್ಮಾಪಕ ಎಸ್.ವಿ. ಶಿವಕುಮಾರರ 3ನೇ ಕಥಾಚಿತ್ರವೂ ಇದಾಗಿದೆ. ಕೊರೊನಾ ಉಪಟಳ ನಿಯಂತ್ರಣಕ್ಕೆ ಬಂದ ನಂತರ ಚಿತ್ರ ಬಿಡುಗಡೆಯಾಗಲಿದೆ.
ಓದಿ:ಹಿರಿಯ ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ನಟಿಯರಾದ ಸುಧಾರಾಣಿ, ಶೃತಿ, ಮಾಳವಿಕಾ