ದೇಶ, ವಿದೇಶಗಳಲ್ಲಿರುವ ಹಲವಾರು ಸ್ತರಗಳಲ್ಲಿ ಕನ್ನಡದ ಕೀರ್ತಿ ಪತಾಕೆ ರಾರಾಜಿಸುತ್ತಿದೆ. ಇದಕ್ಕೆ ಕಾರಣ ಅನೇಕ ಮಹಾನುಭಾವರು ಮಾಡಿರುವ ಸಾಧನೆಗಳು. ಅಂತಹ ವ್ಯಕ್ತಿತ್ವಗಳಲ್ಲಿ ಡಾ.ಗಿರೀಶ್ ಕಾರ್ನಾಡ್ ಕೂಡ ಒಬ್ಬರು.
ಶಂಕರ್ನಾಗ್ ಜೊತೆಗಿರುವ ಗಿರೀಶ್ ಕಾರ್ನಾಡ್ ಭಾರತದ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡುವ ಪ್ರತಿಷ್ಠಿತ ಪ್ರಶಸ್ತಿ ಎಂದರೆ ಅದು ಜ್ಞಾನಪೀಠ ಪ್ರಶಸ್ತಿ. ಇಂತಹ ಮಹೋನ್ನತ ಪ್ರಶಸ್ತಿಯು ಕನ್ನಡ ಸಾಹಿತ್ಯ ಲೋಕಕ್ಕೆ 8 ಬಾರಿ ಬಂದಿದೆ. ಅದರಲ್ಲಿ 7ನೇ ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಗಿರೀಶ್ ಕಾರ್ನಾಡ್ ಅವರ 'ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ (ನಾಟಕಗಳು)' ಎಂಬ ಕೃತಿಗೆ. ಇದು 1998ರಲ್ಲಿ.
ಶೃತಿ ಜತೆಗೆ ಗಿರೀಶ್ ಕಾರ್ನಾಡ್ ಕಾರ್ನಾಡ್ ಅವರು ಅತೀ ಹೆಚ್ಚು ಇಷ್ಟಪಡುತ್ತಿದ್ದ ಕ್ಷೇತ್ರಗಳಲ್ಲಿ ಸಿನಿಮಾ ಕ್ಷೇತ್ರವೂ ಒಂದಾಗಿತ್ತು. ಅಷ್ಟೇ ಅಲ್ಲದೆ ಕಾರ್ನಾಡ್ ಅವರ ನೈಜತೆಯಿಂದ ಕೂಡಿದ ಅಭಿನಯ ಅನೇಕರಿಗೆ ಅಚ್ಚುಮೆಚ್ಚು ಹಾಗೂ ಸ್ಫೂರ್ತಿದಾಯಕ. ಯಾಕೆಂದರೆ, ಅವರ ನಟನೆಯಲ್ಲಿ ಹಾಗೂ ಆ ಪಾತ್ರದಲ್ಲಿ ಒಂದು ತೆರನಾದ ಗತ್ತು ಇರುತ್ತದೆ. ಶೂಟಿಂಗ್ಗೆ ಹೋದಾಗ ನವ ಯುವಕನಂತೆ ಲವಲವಿಕೆಯಿಂದ ಇರುತ್ತಿದ್ದ ಅವರನ್ನು ಚಿತ್ರರಂಗ ಪ್ರೀತಿಸುತಿತ್ತು. ಅವರ ನಟನೆಗೆ ಭಾರತೀಯ ಸಿನಿರಂಗದ ಹಿರಿಯ ನಟರೆಲ್ಲ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಾರ್ನಡ್ ಅವರಿಗೆ ಶಿಸ್ತು, ಸಂಯಮ, ವಿನಯವೇ ಆಸ್ತಿಯಾಗಿತ್ತು. ಅಷ್ಟೇ ಅಲ್ಲ ಅನಾವಶ್ಯಕವಾಗಿ ದುಡ್ಡು ಖರ್ಚು ಮಾಡುವುದೆಂದರೆ ಅವರಿಗೆ ಆಗುತ್ತಿರಲಿಲ್ಲ.
1970ರಿಂದ ಅವರ ಸಿನಿಮಾ ಪಯಣ ಪ್ರಾರಂಭಗೊಂಡಿದ್ದು, ಕನ್ನಡ, ತಮಿಳು, ಹಿಂದಿ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಯರು ಬಂದರು ಮಾವನ ಮನೆಗೆ, ನೀ ತಂದ ಕಾಣಿಕೆ, ಹೊಸ ನೀರು, ಸಂಕ್ರಾಂತಿ, ಬಾಳೊಂದು ಭಾವಗೀತೆ, ಸಂಸ್ಕಾರ, ವಂಶವೃಕ್ಷ, ಎಕೆ-47, ಸಂತ ಶಿಶುನಾಳ ಶರೀಫ, ಏಪ್ರಿಲ್‌ಫೂಲ್, ತನನಂ ತನನಂ, ಆ ದಿನಗಳು, ಕೆಂಪೇಗೌಡ ಹೀಗೆ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತ ಶಿಶುನಾಳ ಶರೀಫ ಚಿತ್ರದಲ್ಲಿ ಇವರು ನಿರ್ವಹಿಸಿದ ಗುರು ಗೋವಿಂದ ಭಟ್ಟರ ಪಾತ್ರಕ್ಕೆ ಕರ್ನಾಟಕ ರಾಜ್ಯ ಅತ್ಯುತ್ತಮ ಪೋಷಕ ನಟ ಗೌರವ ಲಭಿಸಿದೆ. ಅಲ್ಲದೆ ಸಲ್ಮಾನ್ಖಾನ್ ಅಭಿನಯಿಸಿದ್ದ ಏಕ್ ಥಾ ಟೈಗರ್ (ಆಗಸ್ಟ್ 15, 2012) ಹಾಗೂ ಟೈಗರ್ ಜಿಂದಾ ಹೈ (ಡಿಸೆಂಬರ್ 22, 2017) ಸಿನಿಮಾಗಳಲ್ಲಿ ಕಾರ್ನಾಡರು ಕಡೆಯದಾಗಿ ನಟಿಸಿದ ಚಿತ್ರವಾಗಿದೆ.
ಚಿರಂಜೀವಿ ಸರ್ಜಾ ಹಾಗೂ ಕುಮಾರ್ ಬಂಗಾರಪ್ಪ ಅವರೊಂದಿಗೆ ಗಿರೀಶ್ ಕಾರ್ನಾಡ್ ಮೊದಲು ಬಿ ವಿ ಕಾರಂತರ ಜೊತೆ ಸೇರಿಕೊಂಡು ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಸಿನಿಮಾಗಳ ನಿರ್ದೇಶನ ಮಾಡಿದ್ದರು. ಬಳಿಕ ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಅಗ್ನಿ ಮತ್ತು ಮಳೆ ಎಂಬ ಸಿನಿಮಾಗಳನ್ನು ನಿರ್ದೇಶಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಾರ್ನಾಡ್ರಿಗೆ ‘ಜ್ಞಾನಪೀಠ ಪ್ರಶಸ್ತಿ’ ಪ್ರಕಟಣೆ ಆಗಿದ್ದು ಕಾನೂರು ಹೆಗ್ಗಡತಿ’ (ಕುವೆಂಪು ಅವರ ಕಥೆ ಆಧಾರಿತ) ಚಿತ್ರೀಕರಣದ ಸಂದರ್ಭದಲ್ಲಿ,ಆಗವರು ತೀರ್ಥಹಳ್ಳಿಯಲ್ಲೇ ಇದ್ದರು. ಮಾಧ್ಯಮದವರು ಸಹ ಅಂದು ಅವರ ಸಂತೋಷದಲ್ಲಿ ಜೊತೆಯಾಗಿದ್ದರು.
ರಾಷ್ಟ್ರಕವಿ ಕುವೆಂಪು ಅವರ ಕೃತಿಯಾಧಾರಿತ ಸಿನಿಮಾ ಮಾಡುವಾಗ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಕಾರ್ನಾಡರ ಆನಂದದ ಜೊತೆಗೆ ವಿಶೇಷ ಅನ್ನಿಸಿತ್ತು. ಅವರು ಮಾಧ್ಯಮದವರ ಜೊತೆ ಸಲುಗೆಯಿಂದ ಇರುತ್ತಿರಲಿಲ್ಲ. ಅವರಿಗೆ ಬೇಕಾದ ವ್ಯಕ್ತಿಗಳನಷ್ಟೇ ಮಾತನಾಡಿಸುತ್ತಿದ್ದರು. ದೃಶ್ಯ ಮಾಧ್ಯಮ ಬಂದ ನಂತರವಂತೂ ಚಿತ್ರೀಕರಣ ಸಮಯದಲ್ಲಿ ಕ್ಯಾಮರಾ ಮುಂದೆ ಮಾತನಾಡಬಾರದು ಎಂದು ನಿಯಮವನ್ನು ರೂಢಿಸಿಕೊಂಡಿದ್ದರು.
ಇದೀಗ ಗಿರೀಶ್ ಕಾರ್ನಾಡರ ಅಗಲಿಕೆಯಿಂದ ಸಾಹಿತ್ಯ ಲೋಕ ಹಾಗೂ ಚಿತ್ರರಂಗಕ್ಕೂ ತುಂಬಲಾರದ ನಷ್ಟವಾಗಿದೆ. ಕನ್ನಡ ನಾಟಕರಂಗ, ಸಾಹಿತ್ಯ ಮಾತ್ರವಲ್ಲದೆ, ಸಿನಿಲೋಕದಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಇಂತಹ ಬಹುಮುಖ ಪ್ರತಿಭೆಯನ್ನು ಕಳೆದುಕೊಂಡ ನಾಡು ಇಂದು ಬಡವಾಗಿವೆ.