ದೇಶಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅಂತೆಯೇ ಸ್ಯಾಂಡಲ್ವುಡ್ ಹಬ್ಬ ಕಳೆಗಟ್ಟಿದೆ. ಕನ್ನಡದ ಕೆಲ ಸ್ಟಾರ್‌ಗಳ ಮನೆಯಲ್ಲಿ ಗಣೇಶನ್ನು ಕೂರಿಸಿ, ವಿಶೇಷ ಪೂಜೆ ಮಾಡುವ ಮೂಲಕ ಗಣಪನ ಆರಾಧನೆ ಮಾಡಿದ್ದಾರೆ.
ಪ್ರತಿವರ್ಷ ಗಣೇಶ ಹಬ್ಬವನ್ನ ಅದ್ಧೂರಿಯಾಗಿ ಮಾಡುವ ಸ್ಟಾರ್ ಕುಟುಂಬ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ. ಗೌರಿ ಗಣೇಶ ಹಬ್ಬ, ಬಂತು ಅಂದರೆ ಉಪೇಂದ್ರ ಮನೆಯಲ್ಲಿ ನಾಲ್ಕು ದಿನ ಮುಂಚಿತವಾಗಿ ಗಣೇಶ ಹಬ್ಬದ ಸಡಗರ ಇರುತ್ತೆ. ಪ್ರಿಯಾಂಕಾ ಉಪೇಂದ್ರ ಕತ್ರಿಗುಪ್ಪೆಯಲ್ಲಿರೋ ಮನೆಯಲ್ಲಿ ಪ್ರತಿ ವರ್ಷ ಗಣೇಶನ್ನ ಕೂರಿಸಿ ವಿಶೇಷ ಪೂಜೆ ಮಾಡುತ್ತಾರೆ. ಇನ್ನು ಉಪೇಂದ್ರರಿಗೆ ಇಷ್ಟವಾದ ದೇವರು ಗಣೇಶ ಆಗಿರುವುದರಿಂದ ಗಣೇಶ ಆರಾಧನೆಯನ್ನು ಭಕ್ತಿ ಶ್ರದ್ಧೆ ಯಿಂದ ನೆರವೇರಿಸುತ್ತಾರೆ.
ಸುಖ ಶಾಂತಿ ನೆಮ್ಮದಿ ನೀಡೆಂದು ಪ್ರಾರ್ಥಿಸಿದ ಸುಮಲತಾ :
ನಟಿ ಹಾಗು ಸಂಸದೆ ಆಗಿರುವ ಸುಮಲತಾ ಅಂಬರೀಶ್ ಮನೆಯಲ್ಲಿಯೂ ಹಬ್ಬ ಜೋರಾಗಿದೆ. ಗೋಲ್ಡ್ ಮತ್ತು ಪಿಂಕ್ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ಸುಮಲತಾ ಅಂಬರೀಶ್, ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಸುಮಲತಾಗೆ ಪುತ್ರ ಅಭಿಷೇಕ್ ಅಂಬರೀಶ್ ಪೂಜೆಗೆ ಸಾಥ್ ಕೊಟ್ಟಿದ್ದಾರೆ. ಮಂಗಳಮೂರ್ತಿ, ವಿಘ್ನವಿನಾಶಕನಾದ ಗಣೇಶನು ನಿಮ್ಮೆಲ್ಲರಿಗೂ ಆರೋಗ್ಯ, ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಲಿ ಎಂದು ಸುಮಲತಾ ಪ್ರಾರ್ಥಿಸಿದ್ದಾರೆ.