ಕಳೆದ ಮಾರ್ಚ್ ತಿಂಗಳಿನಿಂದ ಯಾವುದೇ ಸ್ಟಾರ್ ನಟರು ಕೊರೊನಾ ವೈರಸ್ ಭೀತಿ ಹಿನ್ನೆಲೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿಲ್ಲ.
ಪುನೀತ್ ರಾಜಕುಮಾರ್, ವಿ. ರವಿಚಂದ್ರನ್, ಜಗ್ಗೇಶ್ ಹಾಗೂ ಇನ್ನಿತರರು ತಮ್ಮ ಜನ್ಮದಿನವನ್ನು ಅಭಿಮಾನಿಗಳಿಲ್ಲದೆ ಸಿಂಪಲ್ ಆಗಿ ಆಚರಿಸಿಕೊಂಡಿದ್ದರು. ಅದೇ ರೀತಿ ತಮ್ಮ ಬರ್ತಡೇಯನ್ನು ಸರಳವಾಗಿ ಆಚರಿಸಿಕೊಳ್ಳಲು ಗೋಲ್ಡನ್ ಸ್ಟಾರ್ ಗಣೇಶ್ ಮುಂದಾಗಿದ್ದಾರೆ. ಈ ಹಿನ್ನೆಲೆ ಅಭಿಮಾನಿಗಳಿಗೆ ಒಂದು ಮನವಿಯನ್ನು ಸಹ ಮಾಡಿದ್ದಾರೆ. ಬೇರೆ ಬೇರೆ ಊರುಗಳಿಂದ ಬಂದು ನಮ್ಮ ಮನೆಯ ಮುಂದೆ ಅಭಿಮಾನಿಗಳು ಸೇರುವುದು ಬೇಡವೆಂದು ಹೇಳಿದ್ದಾರೆ. ಜುಲೈ 2ರಂದು ಗಣೇಶ್ 43ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಈ ಮನವಿ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಮನವಿ ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ. ನೀವು ಅನೇಕ ಜಿಲ್ಲೆಗಳಿಂದ ದುಡ್ಡು ಖರ್ಚು ಮಾಡಿಕೊಂಡು ಬರುವುದರ ಬದಲು ಆ ದುಡ್ಡನ್ನು ಅವಶ್ಯಕತೆ ಇರುವವರಿಗೆ ಸಹಾಯ ಮಾಡಿ ಎಂದು ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಗಣೇಶ್ ಒಂದು ಪ್ರಕಟಣೆ ಸಹ ಮಾಡಿದ್ದಾರೆ. ನೀವು ಎಲ್ಲಿದ್ದೀರೋ ಅಲ್ಲಿಂದಲೇ ನನಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದಾರೆ.
ಜುಲೈ 2 ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟು ಹಬ್ಬಕ್ಕೆ ಸಿಂಪಲ್ ಸುನಿ ಅವರ ಮತ್ತೊಂದು ಸಿನಿಮಾ ‘ಸಕ್ಕತ್’ ಮೋಷನ್ ಪೋಸ್ಟರ್ ಬಿಡುಗಡೆ ಆಗುತ್ತಿದೆ. ಗಣೇಶ್ ಹಾಗೂ ಸುನಿ ಜೋಡಿ ಈ ಹಿಂದೆ ‘ಚಮಕ್’ ಸಿನಿಮಾ ನೀಡಿದ್ದರು.
ಗಣೇಶ್ ಅಭಿನಯದ ‘ಗಾಳಿಪಟ 2’ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿದೆ. ಗಣೇಶ್ ‘ತ್ರಿಬಲ್ ರೈಡಿಂಗ್’ ಎಂಬ ಮತ್ತೊಂದು ಸಿನಿಮಾಕ್ಕೂ ಸಹ ಸಹಿ ಹಾಕಿದ್ದಾರೆ.