ಅದೇಕೋ ಏನೋ ಗೊತ್ತಿಲ್ಲ. ಯೋಗರಾಜ ಭಟ್ಟರ ‘ಗಾಳಿಪಟ 2’ ಚಿತ್ರದಲ್ಲಿ ಮೇಲಿಂದ ಮೇಲೆ ಬದಲಾವಣೆಗಳು ಆಗ್ತಾನೇ ಇವೆ. ಮೊದಲು ನಾಯಕರುಗಳ ಆಯ್ಕೆ ವಿಚಾರದಲ್ಲಿ ಚೇಂಜಸ್ ಆಯ್ತು. ಈಗ ಚಿತ್ರ ಸೆಟ್ಟೇರುವುದಕ್ಕೆ ಮುನ್ನವೇ ನಿರ್ಮಾಪಕರು ಬದಲಾಗಿದ್ದಾರೆ.
ಕನ್ನಡದಲ್ಲಿ ‘ಉಪ್ಪು ಹುಳಿ ಖಾರ’ ಹಾಗೂ ‘ಪಡ್ಡೆ ಹುಲಿ’ ಚಿತ್ರಗಳನ್ನು ನಿರ್ಮಿಸಿರುವ ರಿಯಲ್ ಎಸ್ಟೇಟ್ ವ್ಯಾಪಾರಿ ರಮೇಶ್ ರೆಡ್ಡಿ (ನಂಗ್ಲಿ) ಗಾಳಿಪಟ-2 ಚಿತ್ರಕ್ಕೆ ಬಂಡವಾಳ ಹೂಡುವುದಾಗಿ ಮುಂದೆ ಬಂದಿದ್ದಾರೆ. ಈ ಬಗ್ಗೆ ಭಟ್ರು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅತ್ಯುತ್ತಮ ಚಿತ್ರವನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಲು ಬಂದಿರುವ ರಮೇಶ್ ರೆಡ್ಡಿಯವರಿಗೆ ಶುಭಾಶಯಗಳು ಎಂದು ತಂಡಕ್ಕೆ ಬರಮಾಡಿಕೊಂಡಿದ್ದಾರೆ.
ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ಕಾಣಿಸಿಕೊಳ್ತಾರೆ. ದಿಗಂತ್ ಜೊತೆಯಾಗಿ ಸಂಯುಕ್ತ ಮೆನನ್ ಹಾಗು ಪವನ್ ಕುಮಾರ್ ನಾಯಕಿಯಾಗಿ ಶರ್ಮಿಲಾ ಮಾಂಡ್ರೆ ಕಾಣಿಸಿಕೊಳ್ಳುತ್ತಾರೆ. ಈ ಮೊದ್ಲು ಶರಣ್, ರಿಷಿ ಹಾಗೂ ಸೋನಲ್ ಮೊಂಟೆರಿ ತಾರಾಗಣ ಎಂದು ಹೇಳಲಾಗಿತ್ತು.
ಪೋಷಕ ಪಾತ್ರಗಳಲ್ಲಿ ಹಿರಿಯ ನಟರುಗಳಾದ ಅನಂತ್ ನಾಗ್ (ಶಿಕ್ಷಕರ ಪಾತ್ರ), ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ಯೋಗರಾಜ ಭಟ್ಟರ ಫೇವರೆಟ್ ಸಂಗೀತ ನಿರ್ದೇಶಕರಾರೂ ಕೆಲಸ ಮಾಡುತ್ತಿಲ್ಲ. ಇದೇ ಮೊದಲ ಬಾರಿಗೆ ಭಟ್ಟರ ಕ್ಯಾಂಪಿಗೆ ಅರ್ಜುನ್ ಜನ್ಯ ಎಂಟ್ರಿ ಕೊಟ್ಟಿದ್ದು, ಕುತೂಹಲ ಹೆಚ್ಚಾಗಿದೆ.
ಫಿಲಂನ ಮೊದಲಾರ್ಧವನ್ನು ಮಡಿಕೇರಿ, ಕುದುರೆಮುಖ ಹಾಗು ಜೋಗದ ಕಡೆ ಚಿತ್ರೀಕರಣ ಮಾಡಲಾಗುತ್ತದೆ. ಉಳಿದ ಎರಡನೇ ಭಾಗವನ್ನು ಕೆನಡಾ, ಅಮೆರಿಕ ದೇಶಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ.