ಆಟೋ ಚಾಲಕರಿಗೆ ಈಗಲೂ ದಿವಂಗತ ಶಂಕರ್ ನಾಗ್ ಅಚ್ಚು ಮೆಚ್ಚು. ಶಂಕರ್ ನಾಗ್ ಅವರ ಫೋಟೋ ಆಟೋಗಳ ಮೇಲೆ ಕಾಣುವುದು ಸಹಜ. ಅದಕ್ಕೆ ಕಾರಣ ಶಂಕರ್ ನಾಗ್ ಅವರ ಅಭಿನಯದ ‘ಆಟೋ ರಾಜ’ ಸಿನಿಮಾ.
ಈಗ ಶಂಕರ್ ನಾಗ್ ನೆನಪಿನಲ್ಲಿ, ಅವರ ಹುಟ್ಟೂರಾದ ಹೊನ್ನಾವರ ಬಳಿ ಚಿತ್ರೀಕರಣವಾಗಿರುವ ‘ಫ್ಯಾನ್’ ಕನ್ನಡ ಸಿನಿಮಾ, ಆಟೋ ಚಾಲಕರಿಗೆ ಆಗಸ್ಟ್ 23 ರಂದು ಉಚಿತವಾಗಿ ತೋರಿಸಲು ನಿರ್ಧರಿಸಲಾಗಿದೆ. ಅಂದು ಆಟೋ ಚಾಲಕರು ಕೆ ಜಿ ರಸ್ತೆಯ ಚಿತ್ರಮಂದಿರಕ್ಕೆ ಬಂದು ತಮ್ಮ ಗುರುತಿನ ಚೀಟಿ ತೋರಿಸಬೇಕು ಅಷ್ಟೇ. ಅಲ್ಲಿ ‘ಫ್ಯಾನ್’ ಚಿತ್ರ ತಂಡ ಆಟೋ ಚಾಲಕರಿಗೆ ಉಚಿತ ಪ್ರವೇಶದ ಏರ್ಪಾಡು ಮಾಡುತ್ತೆ.
‘ಫ್ಯಾನ್’ ಚಿತ್ರವನ್ನು ಶಂಕರ್ ನಾಗ್ ನೆನಪಿಗೋಸ್ಕರವೇ ಮಾಡಲಾಗಿದೆ. ಶಂಕರ್ ನಾಗ್ ಅವರ ಬಾಲ್ಯದ ದಿವಸಗಳ ಒಡನಾಟ ಇದ್ದ ಸ್ಥಳವಾದ ಹೊನ್ನಾವರದಲ್ಲಿ ಈ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಕಥಾ ನಾಯಕ ಆರ್ಯನ್ ಸೆಲಿಬ್ರಿಟಿ. ಆತ ಸಹ ಶಂಕರ್ ನಾಗ್ ಅಭಿಮಾನಿ. ಇನ್ನು ಚಿತ್ರದ ಕಥಾ ನಾಯಕಿ ಅದ್ವಿತಿ ಶೆಟ್ಟಿ.
ಶಂಕರ್ ನಾಗ್ ನೆನಪಿನಲ್ಲಿ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ‘ಆಟೋ ರಾಜ’ ಚಿತ್ರ ಬಿಡುಗಡೆಯಾಗಿತ್ತು. ಅದಕ್ಕೂ ಮುಂಚೆ ಉಪೇಂದ್ರ ಅಭಿನಯದಲ್ಲಿ ‘ಆಟೋ ಶಂಕರ್’ ಸಿನಿಮಾ ಬಿಡುಗಡೆ ಆಗಿತ್ತು. ಇವೆರಡರ ಜೊತೆ ‘ಆಟೋ’ ಅಂತ ಹೆಸರಿನಲ್ಲಿ ಸಹ ಒಂದು ಸಿನಿಮಾ ಸಹ ಬಿಡುಗಡೆ ಆಗಿತ್ತು.
ಈಗ ಶಂಕರ್ ನಾಗ್ ಅಭಿಮಾನಿಗಳಲ್ಲಿ ಹೆಚ್ಚು ಇರುವವರು ಆಟೋ ಚಾಲಕರು. ಅವರಿಗೆ ಉಚಿತ ಪ್ರವೇಶ ‘ಫ್ಯಾನ್’ ಕನ್ನಡ ಸಿನಿಮಾ ನೀಡುವುದರೊಂದಿಗೆ ಚಿತ್ರದ ಪ್ರಚಾರಕ್ಕೂ ಸಹಾಯಕವಾಗಲಿದೆ.