ರಂಗನಾಯಕಿ
ಟೈಟಲ್ ಹಾಗೂ ಪೋಸ್ಟರ್ನಿಂದ ಕುತೂಹಲ ಮೂಡಿಸಿದ್ದ ದಯಾಳ್ ಪದ್ಮನಾಭನ್ ನಿರ್ದೇಶನದ 'ರಂಗನಾಯಕಿ' ಈಗಾಗಲೇ ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿರುವ ಸಿನಿಮಾ. ಈ ಸಿನಿಮಾ, ಗೋವಾದಲ್ಲಿ ನವೆಂಬರ್ 20 ರಿಂದ 28 ವರೆಗೆ ನಡೆಯಲಿರುವ 50 ನೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನವಾಗಲಿದೆ. ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಸಮಾಜ ಯಾವ ರೀತಿ ನೋಡುತ್ತದೆ. ಆಕೆ ಎಲ್ಲವನ್ನೂ ಎದುರಿಸಿ ಮುಂದೆ ಹೇಗೆ ಬದುಕುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್, ಶಿವರಾಮಣ್ಣ, ಸುಚೇಂದ್ರ ಪ್ರಸಾದ್, ಶ್ರುತಿ ನಾಯಕ್ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಎಸ್.ವಿ. ಎಂಟರ್ಟೈನ್ಮೆಂಟ್ ಅಡಿ ಎಸ್.ವಿ. ನಾರಾಯಣ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಖದ್ರಿ ಮಣಿಕಾಂತ್ ಸಂಗೀತ, ರಾಕೇಶ್ ಛಾಯಾಗ್ರಹಣ, ನವೀನ್ ಕೃಷ್ಣ ಸಂಭಾಷಣೆ ಇದೆ.
ಸ್ಟಾರ್ ಕನ್ನಡಿಗ
ಕರ್ನಾಟಕದಲ್ಲಿ ಕನ್ನಡಿಗನೇ ಸ್ಟಾರ್ ಹಾಗೂ ಸಾರ್ವಭೌಮ ಎಂಬ ಅಂಶ ಹೊತ್ತ ‘ಸ್ಟಾರ್ ಕನ್ನಡಿಗ’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಚನ್ನವೀರ, ಅರುಣ್, ಭೈರವ ಎಂಬ ಮೂವರು ಆಟೋ ಚಾಲಕರು ಹಾಗೂ ಹರೀಶ್ ಜೋಗಿ ಎಂಬ ಕ್ಯಾಬ್ ಚಾಲಕ ಸೇರಿ ನಿರ್ಮಿಸಿರುವ ಸಿನಿಮಾ ಇದು. ಮಂಜುನಾಥ್ ಪಿಕ್ಚರ್ಸ್ ಬ್ಯಾನರ್ ಅಡಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ನಾಯಕ ಹಾಗೂ ನಿರ್ದೇಶಕ ಮಂಜುನಾಥ್, ಕನ್ನಡದ ಮೇಲಿನ ಪ್ರೀತಿಯನ್ನು ಚಿತ್ರದಲ್ಲಿ ತೋರ್ಪಡಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಸುತ್ತ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ 5 ಹಾಡುಗಳಿವೆ. ಶಾಲಿನಿ ಭಟ್, ಈ ಚಿತ್ರದಲ್ಲಿ ನಾಯಕಿ ಆಗಿ ನಟಿಸಿದ್ದಾರೆ. ರಾಕ್ಲೈನ್ ಸುಧಾಕರ್ ಹೊರತುಪಡಿಸಿ ಚಿತ್ರದಲ್ಲಿ ನಟಿಸಿರುವ ಎಲ್ಲರೂ ಹೊಸಬರೇ. ಕಿರಣ್, ರೋಹಿತ್, ಕೆವಿನ್, ಹರೀಶ್, ಮೋಹನ್, ಎಂ ನಾಗಭೂಷಣ್, ಕೋಬ್ರಾ ನಾಗರಾಜ್ ಹಾಗೂ ಇತರರು ಚಿತ್ರದಲ್ಲಿ ನಟಿಸಿದ್ದಾರೆ. ಫ್ರಾನ್ಸಿಸ್ ಹಾಗೂ ಪ್ರತಾಪ್ ನೃತ್ಯ, ಮಹಾದೇವ ಛಾಯಾಗ್ರಹಣ, ಶಿವಕುಮಾರಸ್ವಾಮಿ ಸಂಕಲನ, ಪವನ್ ಪಾರ್ಥ ಹಿನ್ನೆಲೆ ಸಂಗೀತ ಈ ಚಿತ್ರಕ್ಕೆ ಇದೆ.