ಕನ್ನಡದಲ್ಲಿ ಅನೇಕ ಪ್ರಯೋಗಾತ್ಮಕ ಸಿನಿಮಾಗಳು ತೆರೆ ಕಂಡಿವೆ. ಅದರಲ್ಲೂ '6-5=2' ಸಿನಿಮಾ ತರುವಾತ ದೆವ್ವದ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗಿವೆ. ಇದೀಗ ಈ ಸಾಲಿಗೆ ಚೆಕ್ ಪೋಸ್ಟ್ ಹೊಸ ಸೇರ್ಪಡೆ. ಆದರೆ, ಈ ಸಿನಿಮಾದಲ್ಲಿ ಘೋಸ್ಟ್ ಚಟುವಟಿಕೆ ಅಗೋಚರವಾಗಿ ನಡೆಯುವಂತಹ ವಿಚಾರಗಳನ್ನಿಟ್ಟುಕೊಂಡಿದೆ. ಅದನ್ನು ಪ್ಯಾರಾ ನಾರ್ಮಲ್ ಎನ್ನುತ್ತಾರೆ.
ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಬಗೆಗಿನ ಚರ್ಚೆ, ಅವುಗಳಿಂದಾಗುವ ಅನುಭವ ಇಂದು ನಿನ್ನೆಯದಲ್ಲ. ಭೂತ ಅಥವಾ ಋಣಾತ್ಮಕ ಅಂಶ ಕಣ್ಣಿಗೆ ಗೋಚರಿಸದೆ, ಬೇರೆಯದೇ ವಿಧಾನದಿಂದ ತನ್ನ ಇರುವಿಕೆಯನ್ನು ಸೂಚಿಸುವುದೇ ಪ್ಯಾರಾ ನಾರ್ಮಲ್. ಇದನ್ನೇ ಕಮರೊಟ್ಟು ಚೆಕ್ ಪೋಸ್ಟ್ನಲ್ಲಿ ಸೇರಿಸಿಕೊಳ್ಳಲಾಗಿದೆ. ಇದಕ್ಕೆ ವಿಶೇಷ ತರಬೇತಿ ಪಡೆದಿರುವ ನಿಶಾ ವರ್ಮಾ ಅವರನ್ನು ಈ ಸಿನಿಮಾಕ್ಕೆ ತಂದಿದ್ದಾರೆ ನಿರ್ದೇಶಕ ಎ. ಪರಮೇಶ್ ಹಾಗೂ ನಿರ್ಮಾಪಕ ಚೇತನ್ ರಾಜ್.
ಈ ಪ್ಯಾರಾ ನಾರ್ಮಲ್ ಚಟುವಟಿಕೆ ಕಣ್ಣಿಗೆ ಕಾಣುವುದಿಲ್ಲ. ಈ ಬಗ್ಗೆ ಹಲವಾರು ವರ್ಷ ಅಧ್ಯಯನ ಮಾಡಿರುವ ನಿಶಾ ವರ್ಮಾ, ಇಂಡಿಯನ್ ಪ್ಯಾರಾ ನಾರ್ಮಲ್ ಸೊಸೈಟಿ ಸದಸ್ಯೆ. ಕಮರೊಟ್ಟು ಚೆಕ್ ಪೋಸ್ಟ್ ಚಿತ್ರದಲ್ಲಿಯ ಸೈಕೋ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಮಹಿಳಾ ಪ್ಯಾರಾ ನಾರ್ಮಲ್ ಸರ್ಟಿಫಿಕೇಟ್ ಪಡೆದಿರುವ ವ್ಯಕ್ತಿಯನ್ನು ಭಾರತೀಯ ಚಿತ್ರರಂಗದಲ್ಲಿ ಪರಿಚಯ ಮಾಡಿಸಿದ ಕೀರ್ತಿ ಸಹ ಈ ಕನ್ನಡ ಚಿತ್ರಕ್ಕೆ ಸಲ್ಲುತ್ತದೆ.