ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಜಾಲದ ಬಗೆಗಿನ ಚರ್ಚೆ ದಿನದಿಂದ ದಿನಕ್ಕೆ ಬೇರೆ ರೂಪ ಪಡೆದುಕೊಳ್ಳುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ನ ಕೆಲ ನಟ, ನಟಿಯರು ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಸದ್ಯ ಕನ್ನಡ ಚಿತ್ರರಂಗದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.
ಈ ವಿಚಾರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಭೆ ಕರೆದಿದ್ದು, ಸಭೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಗುಬ್ಬಿ ಜೈರಾಜ್, ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ಕಲಾವಿದರ ಸಂಘದ ವತಿಯಿಂದ ಹಿರಿಯ ನಟ ದೊಡ್ಡಣ್ಣ, ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್ ಎಂ ಸುರೇಶ್, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಭಾಗಿಯಾಗಿದ್ದರು.
ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ಮಾತನಾಡಿ, ಯಾಕೆ ಮಾಧ್ಯಮಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹೆಸರನ್ನ ಬಳಸುತ್ತಿದ್ದಾರೆ. ನಮ್ಮ ಮೇಲೆ ಮಾಧ್ಯಮದವರು ಗೂಬೆ ಕೂರಿಸುವ ಕೆಲಸ ಮಾಡಿದ್ರು. ನಾವು ಯಾವ ಡ್ರಗ್ಸ್ ವಿಚಾರವಾಗಿಯೂ ಮಾತನಾಡುವುದಿಲ್ಲ. ಕನ್ನಡ ಚಿತ್ರರಂಗಕ್ಕೆ 75 ವರ್ಷಗಳ ಇತಿಹಾಸ ಇದೆ. ಈ ಡ್ರಗ್ಸ್ ಯಾರು ತೆಗೆದುಕೊಳ್ಳುತ್ತಾರೆ ಅನ್ನೋದರ ಬಗ್ಗೆ ಎನ್ಸಿಬಿ ಸಂಸ್ಥೆ ತನಿಖೆ ಮಾಡಲಿದೆ ಎಂದರು.
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲದ ಆರೋಪಕ್ಕೆ ಫಿಲ್ಮ್ ಚೇಂಬರ್ ಹಿರಿಯರ ಪ್ರತಿಕ್ರಿಯೆ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು ಮಾತನಾಡಿ, ಡಾ. ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಕನ್ನಡ ಚಿತ್ರರಂಗವನ್ನ ಕಟ್ಟಿ ಬೆಳೆಸಿದವರು. ಇಂತಹ ಚಿತ್ರರಂಗದಲ್ಲಿ ನಟ, ನಟಿಯರು ಡ್ರಗ್ಸ್ ಪಡೆಯುತ್ತಾರೆ ಎನ್ನುವ ಆರೋಪವನ್ನು ನಾನು ಒಪ್ಪುವುದಿಲ್ಲ ಎಂದರು.
ಇನ್ನು ಚಿತ್ರರಂಗದಲ್ಲಿ ಹಿರಿಯ ನಟನಾಗಿರೋ ದೊಡ್ಡಣ್ಣ ಕೂಡ, ನಮ್ಮ ಚಿತ್ರರಂಗದಲ್ಲಿ ಡ್ರಗ್ಸ್ ಸಂಸ್ಕೃತಿಯನ್ನು ನಾನು ಯಾವತ್ತೂ ನೋಡಿಲ್ಲವೆಂದು ಸ್ಪಷ್ಟಪಡಿಸಿದರು.