ಬೆಂಗಳೂರು :ಕೊರೊನಾ ಸೋಂಕು ಇಳಿಕೆಯಾಗಿ ರಾಜ್ಯದಲ್ಲಿ ಅನ್‌ಲಾಕ್ 3.O ಜಾರಿಯಾಗಿದೆ. ಎಲ್ಲಾ ಚಟುವಟಿಕೆಗೆ ಅನುಮತಿ ನೀಡಿರುವಂತೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಭೇಟಿ ನೀಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗುಬ್ಬಿ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಂ ಸುರೇಶ್ ಸೇರಿದಂತೆ ಹಲವು ಸದಸ್ಯರು ಸಿಎಂರನ್ನ ಭೇಟಿ ಮಾಡಿ ಚಿತ್ರಮಂದಿರಗಳನ್ನ ತೆರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಸಲ್ಲಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೈರಾಜ್, ರಾಜ್ಯದಲ್ಲಿ ಚಿತ್ರಮಂದಿರಗಳು ಮುಚ್ಚಿ ತುಂಬಾ ದಿನಗಳಾಗಿವೆ. ಸಾಕಷ್ಟು ಚಿತ್ರಮಂದಿರಗಳು ಆರ್ಥಿಕ ನಷ್ಟವನ್ನು ಅನುಭವಿಸಿವೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚಿತ್ರಮಂದಿರಗಳನ್ನ ತೆರೆಯಲು ಅನುಮತಿ ಕೋರಿದ್ದೇವೆ. ಇನ್ನು ನಾಲ್ಕೈದು ದಿನಗಳಲ್ಲಿ ಚಿತ್ರಮಂದಿರ ಆರಂಭಕ್ಕೆ ಅವಕಾಶ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದರು.