ಕನ್ನಡ ಚಿತ್ರರಂಗದಲ್ಲಿ ಎಕ್ಸ್‌ಕ್ಯೂಸ್ ಮಿ, ಅದ್ವೈತಾ, 7 ಓ ಕ್ಲಾಕ್, ಚೆಲುವೆ ನಿನ್ನ ನೋಡಲು ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಎನ್.ಎಂ ಸುರೇಶ್ ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಕ್ರಿಯ ಸದಸ್ಯ ಮತ್ತು ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ಮೇಲೆ ಎನ್.ಎಂ ಸುರೇಶ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿರುವ ಅವರು, ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣ ಕನ್ನಡ ಚಿತ್ರರಂಗದ ನಿರ್ಮಾಪಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಸಿನಿಮಾ ನಿರ್ಮಾಪಕರಿಗೆ ಸಹಾಯ ಆಗುವಂತೆ ಬಜೆಟ್ ಮಂಡಿಸಿ ಎಂದು ಕೇಳಿಕೊಂಡಿದ್ದಾರೆ.
ಸದ್ಯ 125 ಸಿನಿಮಾಗಳಿಗೆ ಸಬ್ಸಿಡಿ ಕೊಡುತ್ತಿದ್ದೀರ. 50 ಸಿನಿಮಾಗಳನ್ನು ಹೆಚ್ಚಿಸುವ ಮೂಲಕ ಒಟ್ಟು 175 ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟರೆ ಅದೆಷ್ಟೋ ನಿರ್ಮಾಪಕರಿಗೆ ಸಹಾಯ ಆಗುತ್ತೆ ಎಂದು ಹೇಳಿದರು.
ಕನ್ನಡ ಸಿನಿಮಾಗಳಿಗೆ ಕಳೆದು ಐದು ವರ್ಷಗಳಿಂದ ಜಿಎಸ್ಟಿಯನ್ನು ಹಾಕಲಾಗಿದೆ. ಆ ಜಿಎಸ್ಟಿ ಹಣವನ್ನು ಆಯಾ ನಿರ್ಮಾಪಕರಿಗೆ ಕೊಡುವಂತೆ ಸಾಕಷ್ಟು ಸಭೆಗಳನ್ನು ಮಾಡಲಾಯಿತು. ಆದ್ರೆ ಈವರೆಗೆ ಆ ಕೆಲಸವಾಗಿಲ್ಲ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಹಾಗೇನಾದರು ರಾಜ್ಯ ಸರ್ಕಾರ ಜಿಎಸ್ಟಿ ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸಿದರೆ ನಿರ್ಮಾಪಕರಿಗೆ ಸಹಾಯವಾಗಲಿದೆ ಎಂದರು.