ಅಗಲಿದ ನಟ ಪುನೀತ್ ರಾಜ್ಕುಮಾರ್ ಬಗ್ಗೆ ನಿನ್ನೆಯಷ್ಟೇ ತಮ್ಮ ಟ್ವಿಟರ್ ಖಾತೆಯಲ್ಲಿ ಭಾವುಕ ನುಡಿಗಳನ್ನು ಬರೆದುಕೊಂಡಿದ್ದ ಕಿಚ್ಚ ಸುದೀಪ್ ಇಂದು ಅಂತ್ಯಕ್ರಿಯೆ ಬಳಿಕ ವಿದಾಯದ ಪತ್ರವೊಂದನ್ನು ಬರೆದುಕೊಂಡಿದ್ದಾರೆ.
"ಈ ಮೂರು ದಿನಗಳ ಬಗ್ಗೆ ನಾನು ಹೇಳಬೇಕೆಂದರೆ, ನಮ್ಮ ಪ್ರೀತಿಯ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಅದ್ಭುತ ಕಾರ್ಯ ಮಾಡಿದ್ದಾರೆ. ಬಹಳ ಘನತೆ -ಶಿಸ್ತಿನಿಂದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ನಾನು ಮಾನ್ಯ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ಪುನೀತ್ಗೆ ಬೀಳ್ಕೊಡುಗೆ ನೀಡುವಲ್ಲಿ ನೀವೆಲ್ಲರೂ ಪ್ರಮುಖ ಪಾತ್ರ ವಹಿಸಿದ್ದೀರಿ" ಎಂದು ಬರೆದಿದ್ದಾರೆ.
"ಈಗ ಎಲ್ಲಾ ಮುಗಿದು ಹೋಯಿತು. ಸಹಜ ಸ್ಥಿತಿಗೆ ಮರಳಲು ನಮಗೆಲ್ಲರಿಗೂ ಅನೇಕ ದಿನಗಳು ಬೇಕು. ಇದು ಕೇವಲ ನಷ್ಟವಲ್ಲ, ದೊಡ್ಡ ಆಘಾತ. ಜನರು ಮತ್ತು ಚಿತ್ರರಂಗ ಈ ಆಘಾತದಿಂದ ಹೊರಬರಲೇ ಬೇಕಿದೆ. ಮತ್ತೊಂದು ಸುಂದರ ಅಧ್ಯಾಯ ಅಂತ್ಯ ಕಂಡಿರುವುದಕ್ಕೆ ಈ ದಿನ ಸಾಕ್ಷಿಯಾಗಿದೆ" ಎಂದು ನೋವಿನ ನುಡಿ ಹಂಚಿಕೊಂಡಿದ್ದಾರೆ ಕಿಚ್ಚ.
ಇದನ್ನೂ ಓದಿ:ಕತ್ತಲು ಆವರಿಸಿದಂತಿದೆ.. ನನ್ನ ಉಸಿರು ಭಾರವಾಯಿತು.. ಆ ಸ್ಥಳ ‘ಅಪ್ಪು’ಗೆ ಮಾತ್ರ ಮೀಸಲು.. ಕಿಚ್ಚನ ಭಾವುಕ ನುಡಿ ನಮನ
"ಅಂತ್ಯಕ್ರಿಯೆ ವೇಳೆ ನಾನಲ್ಲಿ ಕುಳಿತಿರುವಾಗ, ಪುನೀತ್ ಮಕ್ಕಳ ಮನಸ್ಸಲ್ಲಿ, ಅಲ್ಲಿದ್ದ ಎಲ್ಲ ಹಿರಿಯರ ಮನಸ್ಸಿನಲ್ಲಿ ಏನು ಆಲೋಚನೆ ಓಡುತ್ತಿರಬಹುದು ಎಂದು ಯೋಚಿಸುತ್ತಾ ನಾನು ಆಶ್ವರ್ಯಚಕಿತನಾಗಿ ನೋಡುತ್ತಿದ್ದೆ" ಎಂದು ಸುದೀಪ್ ಪತ್ರದಲ್ಲಿ ಹೇಳಿದ್ದಾರೆ.