ಲಾಕ್ಡೌನ್ ತೆರವುಗೊಂಡು ಚಿತ್ರೀಕರಣಕ್ಕೆ ಅವಕಾಶ ನೀಡಿದ ನಂತರ ಬಹುತೇಕ ಎಲ್ಲಾ ನಟರು ಬಾಕಿ ಇರುವ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತೆ ಕೆಲವರು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ದರ್ಶನ್ ಮಾತ್ರ ತಮ್ಮದೇ ಪ್ರಪಂಚದಲ್ಲಿ ಜಾಲಿ ಮಾಡುತ್ತಿದ್ದು ಬಾಕಿ ಇರುವ ಸಿನಿಮಾ ಚಿತ್ರೀಕರಣದಲ್ಲಿ ಅವರು ಭಾಗವಹಿಸುವುದು ಯಾವಾಗ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಗೆ ಕೊನೆಗೂ ಉತ್ತರ ದೊರೆತಿದೆ. ಏಪ್ರಿಲ್‍ನಿಂದ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ದರ್ಶನ್ ಅಭಿನಯದ 'ರಾಬರ್ಟ್' ಚಿತ್ರವು ಮಾರ್ಚ್ 11ರಂದು ಬಿಡುಗಡೆಯಾಗುತ್ತಿದೆ. ಆ ಸಿನಿಮಾ ಬಿಡುಗಡೆ ನಂತರ ದರ್ಶನ್ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಆದರೆ, ಯಾವ ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಮಾತ್ರ ಉತ್ತರ ದೊರೆತಿಲ್ಲ. ಲಾಕ್‍ಡೌನ್‍ಗೂ ಮುನ್ನ 'ರಾಜವೀರ ಮದಕರಿನಾಯಕ' ಚಿತ್ರದಲ್ಲಿ ದರ್ಶನ್ ನಟಿಸುತ್ತಿದ್ದರು. ಈಗ ಅದೇ ಸಿನಿಮಾ ಮುಂದುವರೆಯಲಿದೆಯಾ..? ಅಥವಾ ಬೇರೆ ಹೊಸ ಚಿತ್ರವನ್ನು ಒಪ್ಪಿಕೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ, 'ರಾಜವೀರ ಮದಕರಿನಾಯಕ' ಚಿತ್ರವನ್ನು ಮುಂದುವರೆಸಬೇಕೋ ಅಥವಾ ಬೇಡವೋ ಎಂಬ ಯೋಚನೆ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರನ್ನು ಕಾಡುತ್ತಿದೆಯಂತೆ.