ಇದುವರೆಗೂ ಖ್ಯಾತ ಸಾಹಿತಿಗಳ ಕಾದಂಬರಿಗಳು, ಸಣ್ಣಕಥೆಗಳು ಸಿನಿಮಾಗಳಾಗಿ ತಯಾರಾಗಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ರಾಷ್ಟ್ರಕವಿ ಕುವೆಂಪು ಪುತ್ರ ಪೂರ್ಣಚಂದ್ರ ತೇಜಸ್ವಿ ಅವರು ಬರೆದ 'ಡೇರ್ಡೆವಿಲ್ ಮುಸ್ತಾಫಾ' ಈಗ ಸಿನಿಮಾವಾಗಲು ಸಕಲ ತಯಾರಿ ನಡೆದಿದೆ.
ತೇಜಸ್ವಿ ಅವರ ಜನ್ಮದಿನ ಸೆಪ್ಟೆಂಬರ್ 8 ರಂದು ಈ ಚಿತ್ರದ ಘೋಷಣೆ ಆಗಿದೆ. ತೇಜಸ್ವಿ ಬರೆದ ಕಾದಂಬರಿ ಆಧಾರಿತ 'ಜುಗಾರಿ ಕ್ರಾಸ್' ಕೂಡಾ ತೆರೆಗೆ ಬರಲು ಸಿದ್ಧವಾಗಿದೆ. 1973ರಲ್ಲಿ ತೇಜಸ್ವಿ ಅವರ ಕಾದಂಬರಿ 'ಅಬಚೂರಿನ ಪೋಸ್ಟ್ ಆಫೀಸ್' ಮೊದಲ ಬಾರಿಗೆ ಸಿನಿಮಾ ಆಗಿ ತಯಾರಾಗಿತ್ತು. ನಂತರ ಅವರು ಬರೆದ 'ತಬರನ ಕಥೆ', 'ಕುಬಿ ಮತ್ತು ಇಯಾಲ', 'ಕಿರಗೂರಿನ ಗಯ್ಯಾಳಿಗಳು' ಕೂಡಾ ರಜತ ಪರದೆ ಮೇಲೆ ಬಂದಿತ್ತು.
ತೇಜಸ್ವಿ ಅವರ 'ಕೃಷ್ಣೇಗೌಡನ ಆನೆ' ಕಥೆಯನ್ನು ಬಹಳ ವರ್ಷಗಳ ಹಿಂದೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡುವುದಾಗಿ ಹಕ್ಕುಗಳನ್ನು ಪಡೆದಿದ್ದರು. 'ಕರ್ವಾಲೋ' ಕೂಡಾ ಸಿನಿಮಾ ಆಗುತ್ತದೆ ಎಂದು ಮತ್ತೊಬ್ಬ ನಿರ್ಮಾಪಕರು ಹೇಳಿಕೊಂಡಿದ್ದರು.
ಇದೀಗ 'ಡೇರ್ಡೆವಿಲ್ ಮುಸ್ತಾಫಾ' ಚಿತ್ರವನ್ನು ತೆರೆಗೆ ತರುತ್ತಿರುವ ಶಶಾಂಕ್ ಸೊಗಲ್, ಮೂರು ಕಿರು ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಕುತೂಹಲ ಕೆರಳಿಸಿ ನಂತರ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಡಿದ್ದಾರೆ. ಈ ಚಿತ್ರದ ಕಥಾ ವಸ್ತು ಇಂದಿನ ದಿವಸಕ್ಕೂ ಬಹಳ ಸೂಕ್ತವಾಗಿದೆ ಎಂದು ನಿರ್ದೇಶಕರು ಹೇಳುತ್ತಾರೆ. ಈ ಚಿತ್ರದ ಹಕ್ಕುಗಳನ್ನು ಅವರು ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಬಳಿ ಪಡೆದುಕೊಂಡಿದ್ದಾರೆ.
'ಡೇರ್ಡೆವಿಲ್ ಮುಸ್ತಾಫಾ' ಚಿತ್ರದಲ್ಲಿ ಬಹುತೇಕ ಹೊಸ ಕಲಾವಿದರು ಇರುತ್ತಾರೆ. ಅವರೊಂದಿಗೆ ಮಂಡ್ಯ ರಮೇಶ್, ಎಂ.ಎಸ್. ಉಮೇಶ್ ಹಾಗೂ ಇತರರು ಕಾಣಿಸಿಕೊಳ್ಳಲಿದ್ದಾರೆ. ಮೈಸೂರು, ಮೇಲುಕೋಟೆ ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಲಾಗಿದೆ.