ಒಂದೆಡೆ 'ಐ ಆ್ಯಮ್ ಕಲ್ಕಿ' ಚಿತ್ರತಂಡ ಖ್ಯಾತ ತಮಿಳು ನಟ ಬಾಬ್ಬಿ ಸಿಂಹ ಅವರನ್ನು ಕನ್ನಡಕ್ಕೆ ಕರೆತರುವ ಬಗ್ಗೆ ಚರ್ಚಿಸುತ್ತಿದ್ದರೆ, ಇತ್ತ ಬಾಬ್ಬಿ ಸಿಂಹ ಈಗಾಗಲೇ ಸದ್ದಿಲ್ಲದೆ ಒಂದು ಕನ್ನಡ ಚಿತ್ರದಲ್ಲಿ ನಟಿಸಿದ್ದಾಗಿದೆ. ಅದೇ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ.
'777 ಚಾರ್ಲಿ' ಚಿತ್ರಕ್ಕೆ ಖ್ಯಾತ ತಮಿಳು ನಟನನ್ನು ಕರೆ ತಂದ ರಕ್ಷಿತ್ ಶೆಟ್ಟಿ - Tamil actor Bobby Simha in 777 Charlie
ಕಿರಣ್ ರಾಜ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ '777 ಚಾರ್ಲಿ' ಸಿನಿಮಾದಲ್ಲಿ ಖ್ಯಾತ ತಮಿಳು ನಟ ಬಾಬ್ಬಿ ಸಿಂಹ ನಟಿಸಿದ್ದಾರೆ. ಇಂದು ಬಾಬ್ಬಿ ಹುಟ್ಟುಹಬ್ಬವಾಗಿದ್ದು ಚಿತ್ರತಂಡ ಬಾಬ್ಬಿ ಸಿಂಹ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.
ಈ ಚಿತ್ರದಲ್ಲಿ ಬಾಬ್ಬಿ ಒಂದು ಅತಿಥಿ , ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಅವರ ಭಾಗದ ಚಿತ್ರೀಕರಣ ಕೊಡೈಕೆನಾಲ್‍ನಲ್ಲಿ ಮುಗಿದಿದೆ. ರಕ್ಷಿತ್ ಶೆಟ್ಟಿ ತನ್ನ ಪ್ರೀತಿಯ ನಾಯಿಯೊಂದಿಗೆ ದೇಶ ಸುತ್ತುವ ಸಮಯದಲ್ಲಿ ದಾರಿಯಲ್ಲಿ ಬಾಬ್ಬಿ ಸಿಂಹ, ರಕ್ಷಿತ್ ಎದುರಾಗಿ ಅವರಿಗೆ ಸ್ಫೂರ್ತಿ ತುಂಬುವ ಪಾತ್ರವಂತೆ. ಈ ಚಿತ್ರದಲ್ಲಿ ಬಾಬ್ಬಿ ವಂಶಿನಾಥನ್ ಹೆಸರಿನ ಶ್ರೀಮಂತನ ಪಾತ್ರದಲ್ಲಿ ನಟಿಸಿದ್ದಾರೆ. ನವೆಂಬರ್ 6 ಬಾಬ್ಬಿ ಸಿಂಹ ಹುಟ್ಟುಹಬ್ಬವಾಗಿದ್ದು ಚಿತ್ರತಂಡ ಬಾಬ್ಬಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಶುಭ ಕೋರಿದೆ. ಈ ಪೋಸ್ಟರ್ನಲ್ಲಿ ರಕ್ಷಿತ್ ಶೆಟ್ಟಿ ಬಿಳಿ ಬಣ್ಣದ ನಾಯಿಯೊಂದಿಗೆ ಹಾಗೂ ಬಾಬ್ಬಿ , ಸಿಗಾರ್ ಸೇದುತ್ತಾ ಕಪ್ಪು ಬಣ್ಣದ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ.
ರಕ್ಷಿತ್ ಮತ್ತು ಬಾಬ್ಬಿ ಅವರದ್ದು ಸುಮಾರು ಐದಾರು ವರ್ಷಗಳ ಹಳೆಯ ಪರಿಚಯವಂತೆ. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಬೇಕು ಎಂದುಕೊಳ್ಳುತ್ತಿದ್ದರೂ ಕಾರಣಾಂತರಗಳಿಂದ ಅದು ಕೂಡಿಬಂದಿರಲಿಲ್ಲವಂತೆ. ಇದೀಗ '777 ಚಾರ್ಲಿ' ಚಿತ್ರದಲ್ಲಿ ಇಬ್ಬರೂ ಜೊತೆಗೆ ನಟಿಸುವ ಅವಕಾಶ ಒಲಿದುಬಂದಿದೆ. ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು 2021 ರಲ್ಲಿ ಚಿತ್ರವನ್ನು ತೆರೆ ಮೇಲೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ಬಾಬ್ಬಿ ಸಿಂಹ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಠ್ ಮುಂತಾದವರು ನಟಿಸಿದ್ದು ಕಿರಣ್ ರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.