ಖ್ಯಾತ ರಂಗಭೂಮಿ, ಕಿರುತೆರೆ, ಬೆಳ್ಳಿತೆರೆ ನಟ ಸಿದ್ದರಾಜ ಕಲ್ಯಾಣ್ಕರ್ ವಿಧಿವಶರಾಗಿದ್ದಾರೆ. ಸಿದ್ದರಾಜ ಕಲ್ಯಾಣ್ಕರ್ ನಿನ್ನೆಯಷ್ಟೇ 60 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಸ್ನೇಹಿತರು, ಕಲಾವಿದರು ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದರು.
ಹುಟ್ಟುಹಬ್ಬದಂದೇ ಇಹಲೋಕ ಯಾತ್ರೆ ಮುಗಿಸಿದ ಹಿರಿಯ ನಟ - Small screen actor Siddaraj kalyankar
ಅಭಿನಯ ಹಾಗೂ ಕಂಚಿನ ಕಂಠಕ್ಕೆ ಹೆಸರಾಗಿದ್ದ ರಂಗಭೂಮಿ ಕಲಾವಿದ ಸಿದ್ದರಾಜ ಕಲ್ಯಾಣ್ಕರ್ ನಿಧನರಾಗಿದ್ದಾರೆ. ನಿನ್ನೆಯಷ್ಟೇ 60 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಸಿದ್ದರಾಜ ಕಲ್ಯಾಣ್ಕರ್ ರಾತ್ರಿ 11.30ಕ್ಕೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸಿದ್ದರಾಜ ಕಲ್ಯಾಣ್ಕರ್ ಮೂಲತ: ಹುಬ್ಬಳ್ಳಿಯವರು. ಚಿಕ್ಕ ವಯಸ್ಸಿನಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 'ಭೂಮಿಗೀತ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, 1993 ರಲ್ಲಿ ಬಿ. ಸುರೇಶ್ ನಿರ್ದೇಶನದ 'ಹೊಸ ಹೆಜ್ಜೆ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟವರು. ಸಿದ್ದರಾಜ ಕಲ್ಯಾಣ್ಕರ್ ನಟನೆಯ ಜೊತೆಗೆ ತಮ್ಮ ಕಂಚಿನ ಕಂಠಕ್ಕೂ ಹೆಸರಾದವರು. ಸುಮಾರು 70 ಸಿನಿಮಾಗಳಲ್ಲಿ ಸಿದ್ದರಾಜ್ ನಟಿಸಿದ್ದಾರೆ.
ನಿನ್ನೆ ಹುಟ್ಟುಹಬ್ಬವಿದ್ದರೂ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅನೇಕ ಸ್ನೇಹಿತರು, ಕಿರುತೆರೆ, ಹಿರಿತೆರೆ ಕಲಾವಿದರು ಸಿದ್ದರಾಜ ಅವರಿಗೆ ಶುಭ ಹಾರೈಸಿದ್ದರು. ಆದರೆ ನಿನ್ನೆ ರಾತ್ರಿ 11.30ರ ವೇಳೆಗೆ ಹೃದಯಾಘಾತದಿಂದ ಸಿದ್ದರಾಜ ಕಲ್ಯಾಣ್ಕರ್ ನಿಧನರಾಗಿದ್ದಾರೆ. ಹಿರಿಯ ನಟನ ನಿಧನಕ್ಕೆ ಕಿರುತೆರೆ, ರಂಗಭೂಮಿ, ಚಿತ್ರರಂಗದ ಕಲಾವಿದರ ಕಂಬನಿ ಮಿಡಿದಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸಿದ್ದರಾಜ್ ಕಲ್ಯಾಣ್ಕರ್ ಅಂತ್ಯಕ್ರಿಯೆ ಜರುಗಲಿದೆ.