ಕರ್ನಾಟಕ

karnataka

ETV Bharat / sitara

'ಎರಡುಸಾವಿರದ ಇಪ್ಪತ್ತು ಗೋಪಿಕೆಯರು' ಚಿತ್ರದ ಆಡಿಯೋ ರಿಲೀಸ್​ - ಎರಡುಸಾವಿರದ ಇಪ್ಪತ್ತು ಗೋಪಿಕೆಯರು ಚಿತ್ರದ ಆಡಿಯೋ ಬಿಡುಗಡೆ

ನಾರಾಯಣಸ್ವಾಮಿ ನಿರ್ದೇಶಿಸಿರುವ ವಿನೂತನ ಕಥಾಹಂದರವನ್ನು ಹೊಂದಿರುವ ಎರಡು ಸಾವಿರದ ಇಪ್ಪತ್ತು ಗೋಪಿಕೆಯರು ಚಿತ್ರದ ಹಾಡುಗಳನ್ನು ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಬಿಡುಗಡೆ ಮಾಡಿದರು..

Eradu saavirada ippattu gopikeyaru movie team
ಎರಡುಸಾವಿರದ ಇಪ್ಪತ್ತು ಗೋಪಿಕೆಯರು ಚಿತ್ರತಂಡ

By

Published : Nov 26, 2021, 7:49 PM IST

ವಿಭಿನ್ನ ಕಥಾಹಂದರ ಹೊಂದಿರುವ ಎರಡು ಸಾವಿರದ ಇಪ್ಪತ್ತು ಗೋಪಿಕೆಯರು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರತಂಡ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ನಡೆಸಿತು.

ಈ ಚಿತ್ರದಲ್ಲಿ ಬಾಲಾಜಿ ಶರ್ಮಾ, ಪ್ರಿಯಾಂಕಾ ಚಿಂಚೋಳಿ, ನಂದೀಶ್‌ ಕಾಣಿಸಿಕೊಂಡಿದ್ದಾರೆ. ಮನಸಾರೆ, ಹರ ಹರ ಮಹಾದೇವ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಪ್ರಿಯಾಂಕಾ ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿವೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾವನ್ನು ಕುಚ್ಚಣ್ಣ ಶ್ರೀನಿವಾಸ್‌ ನಿರ್ಮಿಸಿದ್ದಾರೆ. ಸಿನಿಮಾದ ಹಾಡುಗಳನ್ನು ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಬಿಡುಗಡೆ ಮಾಡಿದರು.

ನಂತರ ಕುಚ್ಚಣ್ಣ ಶ್ರೀನಿವಾಸ್‌ ಮಾತನಾಡಿ, ಚಿತ್ರ ಮಾಡುವ ನಿಟ್ಟಿನಲ್ಲಿ ಮೂರು ಪ್ರಮುಖ ಹಂತಗಳಿರುತ್ತವೆ. ಮೊದಲನೆಯದು ಬರವಣಿಗೆಯ ಹಂತ. ಚಿತ್ರಕಥೆ ಎನ್ನುವುದು ಸವಾಲಿನ ಕೆಲಸ. ಏಕಾಂಗಿಯಾಗಿ ಚಿತ್ರಕಥೆ ಬರೆಯುವುದಕ್ಕೆ ಸಾಧ್ಯವಿಲ್ಲ. ಬರೆದೂ ಇಲ್ಲ ಎಂಬುದು ನನ್ನ ನಂಬಿಕೆ.

ಗುಂಪಿನಲ್ಲಿ ಚರ್ಚೆ ಮಾಡಿಕೊಂಡು, ಮಾತಾಡಿಕೊಂಡು ಮಾಡುವ ಕ್ರಿಯೆ ಅದು. ನಾನು, ನಮ್ಮ ಚಿತ್ರದ ನಿರ್ದೇಶಕ ನಾರಾಯಣಸ್ವಾಮಿ ಒಂದೂವರೆ ವರ್ಷಗಳ ಕಾಲ ಚಿತ್ರಕಥೆ ಮಾಡಿದ್ದೇವೆ. ಎರಡನೆಯ ಹಂತ ಚಿತ್ರೀಕರಣ. ಹಾಗೆಯೇ, ಮೂರನೆಯ ಹಂತ ಹಾಡುಗಳಿಗೆ ಸಂಗೀತ ಅಳವಡಿಸುವುದು.

ಯಾವುದೇ ಚಿತ್ರದ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ತಲುಪಿಸಬೇಕಾದರೆ ಒತ್ತಾಸೆಯಾಗಿ ಸಂಗೀತ ಇರಬೇಕಾಗುತ್ತದೆ. ಸಿನಿಮಾಗಳಲ್ಲಿ ಸಂಗೀತ ಪ್ರಧಾನ ಪಾತ್ರ ವಹಿಸುತ್ತದೆ ಎಂದರು.

ನಟ ಬಾಲಾಜಿ ಶರ್ಮಾ ಹಾಗೂ ನಂದೀಶ್

ಹಾಡು ಎಂದರೆ ಬರೀ ಸಂಗೀತವಷ್ಟೇ ಅಲ್ಲ, ಅದಕ್ಕೆ ಪೂರಕವಾಗಿ ಸಾಹಿತ್ಯ ಬೇಕು. ಅದು ಅದ್ಭುತ ಪ್ರಕ್ರಿಯೆ. ದೊಡ್ಡ ದೊಡ್ಡ ಕವಿಗಳು ಚಿತ್ರಗೀತೆ ಬರೆಯುವುದಕ್ಕೆ ಹೋಗಿ ಕಷ್ಟಪಟ್ಟಿದ್ದನ್ನು ನಾವು ನೋಡಿದ್ದೇವೆ.

ಕಥೆ, ಸನ್ನಿವೇಶ ಮತ್ತು ನಿರ್ದೇಶಕರ ಕಲ್ಪನೆಗೆ ತಕ್ಕ ಹಾಗೆ ಹಾಡುಗಳನ್ನು ಬರೆಯುವುದು ಸುಲಭವಲ್ಲ. ಹೃದಯಶಿವ, ಗೌಸ್ಪೀರ್ ಮತ್ತು ಮಹೇಂದ್ರ ಗೌಡ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಶ್ರೀಧರ್ ಸಂಗೀತ ಸಂಯೋಜಕರಷ್ಟೇ ಅಲ್ಲ, ಒಳ್ಳೆಯ ಸಾಹಿತ್ಯ ಅಭಿರುಚಿ ಹೊಂದಿದ್ದಾರೆ. ಸಾಹಿತ್ಯವು ಸಂಗೀತಕ್ಕೆ ಹೊಂದುತ್ತದೋ ಇಲ್ಲವೋ ಎಂಬುದನ್ನು ಅವರು ಚೆನ್ನಾಗಿ ಜಡ್ಜ್ ಮಾಡುತ್ತಾರೆ ಎಂದರು.

ಬಳಿಕ ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಮಾತನಾಡಿ, ನನ್ನ ಸೀನಿಯರ್ ಆದ ಕುಚ್ಚಣ್ಣ ಶ್ರೀನಿವಾಸ್ ಅವರು ನನಗೆ ಸಿನಿಮಾ ನಿರ್ಮಾಣದ ಬಗ್ಗೆ ತಿಳಿಸಿದ್ದರು. ಇದೀಗ ಆಡಿಯೋ ಬಿಡುಗಡೆಗೆ ನನ್ನ ಆಹ್ವಾನಿಸಿದ್ದಾಗ ಚಿತ್ರ ಈಗಾಗಲೇ ಬಿಡುಗಡೆ ಹಂತಕ್ಕೆ ಬಂದಿರುವ ಸುದ್ದಿ ತಿಳಿದು ಸಂತೋಷವಾಯಿತು.

ಬೇರೆ ಭಾಷೆಗಳಲ್ಲಿ ಕಡಿಮೆ ಹಣ ಖರ್ಚು ಮಾಡಿ ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಅಲ್ಲಿ ಆ ಚಿತ್ರಗಳು ಯಶಸ್ವಿಯಾಗಿದುಂಟು. ಈ ಚಿತ್ರದ ಬಗ್ಗೆ ಕೇಳಿದಾಗ ನನಗೂ ಉತ್ತಮವಾದ ಕಥೆಯುಳ್ಳ ಚಿತ್ರವೆನಿಸುತ್ತಿದೆ.

ನಾವು ಕೂಡ ಉತ್ತಮ ಚಿತ್ರಗಳನ್ನು ಪ್ರೋತ್ಸಾಹಿಸಬೇಕು. ಈ ಚಿತ್ರದ ಹಾಡುಗಳನ್ನು ಕೇಳಿದಾಗ ಕಿವಿಗೆ ಇಂಪಾಯಿತು.‌ ಶ್ರೀಧರ್ ಒಳ್ಳೆಯ ಸಂಗೀತ ನೀಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಇದೇ ವೇಳೆ ಕಲಾವಿದರಾದ ಬಾಲಾಜಿ ಶರ್ಮಾ ಹಾಗೂ ನಂದೀಶ್ ತಮ್ಮ ತಮ್ಮ ಪಾತ್ರಗಳ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ಅಪ್ಪುವನ್ನ ಜೀವಂತವಾಗಿರಿಸಿಕೊಳ್ಳಲೆತ್ನಿಸುತ್ತೇವೆ, ಅವನ ಕನಸನ್ನು ನನಸು ಮಾಡುತ್ತೇವೆ : ನಟ ಶಿವರಾಜ್ ಕುಮಾರ್

ABOUT THE AUTHOR

...view details