ನಿರ್ದೇಶಕ 'ಜೋಗಿ' ಪ್ರೇಮ್, ಇಂದು ಸಖತ್ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಚಿತ್ರದ ಬಗ್ಗೆ ಒಂದು ಹೊಸ ಘೋಷಣೆ ಮಾಡುವುದಾಗಿ ಹೇಳಿದ್ದರು. ಅದರಂತೆ ಪ್ರೇಮ್, ಸೋಷಿಯಲ್ ಮೀಡಿಯಾ ಮೂಲಕ ಒಂದು ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಅದೇನೆಂದರೆ, ಚಿತ್ರವನ್ನು ಅವರು ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.
'ಏಕ್ ಲವ್ ಯಾ' ಚಿತ್ರವು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಚಿತ್ರ ಚಿತ್ರೀಕರಣವಾದರೂ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಕನ್ನಡ ಚಿತ್ರವನ್ನು ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲೂ ಹೆಚ್ಚಾಗಿದೆ. ಈಗಾಗಲೇ 'ಯುವರತ್ನ', 'ಪೊಗರು', 'ಕಬ್ಜ', 'ಮದಗಜ' ಮುಂತಾದ ಚಿತ್ರಗಳು ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿವೆ. ಈಗ ಆ ಸಾಲಿಗೆ 'ಏಕ್ ಲವ್ ಯಾ' ಚಿತ್ರ ಸಹ ಸೇರಿಕೊಂಡಿದೆ.