ಕೊರೊನಾದಿಂದಾಗಿ ದೇಶದೆಲ್ಲೆಡೆ ಆರ್ಥಿಕ ವ್ಯವಸ್ಥೆ ಕುಸಿದಿದೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗಕ್ಕೂ ತಟ್ಟಿದೆ. ಕಳೆದ ಎರಡೂವರೆ ತಿಂಗಳಿನಿಂದ ಯಾವುದೇ ಸಿನಿಮಾ ಶೂಟಿಂಗ್, ಚಿತ್ರ ಪ್ರದರ್ಶನ ಇಲ್ಲದೆ ಇರುವುದರಿಂದ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಇನ್ನೇನು ಲಾಕ್ಡೌನ್ ಸಡಿಲಿಕೆ ನಂತರ, ಚಿತ್ರಮಂದಿರ ಹಾಗೂ ಸಿನಿಮಾ ಶೂಟಿಂಗ್ ಶುರು ಮಾಡೋದಕ್ಕೆ ಚಿತ್ರರಂಗ ಸಜ್ಜಾಗಿದೆ. ಆದರೆ, ಈ ಕೊರೊನಾ ಎಫೆಕ್ಟ್, ಬಿಗ್ ಸ್ಟಾರ್ ನಟರ ಸಿನಿಮಾಗಳ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿರುವುದು ಸತ್ಯ.
ಕೊರೊನಾ ಬರುವುದಕ್ಕಿಂತ ಮುಂಚೆ, ಪುನೀತ್ ರಾಜ್ಕುಮಾರ್, ಸುದೀಪ್, ಯಶ್, ದರ್ಶನ್, ಉಪೇಂದ್ರ ಹೀಗೆ ಸ್ಟಾರ್ ನಟರು ನಟಿಸಿದ್ದ ಸಿನಿಮಾಗಳು ರಿಲೀಸ್ ಆಗೋದಕ್ಕೆ ಒಂದೊಂದು ಡೇಟ್ ಫಿಕ್ಸ್ ಮಾಡಿಕೊಂಡಿದ್ರು. ಆದರೆ, ಈ ಸ್ಟಾರ್ ನಟರ ಸಿನಿಮಾಗಳ ರಿಲೀಸ್ ಡೇಟ್ ಈಗ ತಲೆಕೆಳಗಾಗಿದೆ.
ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗೋದಕ್ಕೆ ಸಜ್ಜಾಗಿದ್ದ ಬಿಗ್ ಸ್ಟಾರ್ಸ್ ಸಿನಿಮಾಗಳಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರ ಕೂಡ ಒಂದು. ಈ ಚಿತ್ರ ಟೈಟಲ್ ಹಾಗೂ ದರ್ಶನ್ ಗ್ಯಾಂಗ್ ಸ್ಟಾರ್ ಲುಕ್ನಿಂದಾಗಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗಮನ ಸೆಳೆದಿದೆ. ನಿರ್ದೇಶಕ ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ, ಎಲ್ಲಾ ಅಂದುಕೊಂಡಂತೆ ನಡೆದಿದ್ರೆ, ಇಷ್ಟೊತ್ತಿಗಾಗಲೇ ತೆರೆಕಂಡು ಎರಡು ತಿಂಗಳು ಆಗ್ತಾ ಇತ್ತು. ಆದರೆ, ಈ ಕೊರೊನಾದಿಂದಾಗಿ ರಾಬರ್ಟ್ ಸಿನಿಮಾ ಈಗ ಜುಲೈ 30ಕ್ಕೆ ರಿಲೀಸ್ ಮಾಡಲು ಸಿದ್ಧತೆ ನಡೆದಿದೆಯಂತೆ.
ಸ್ಯಾಂಡಲ್ವುಡ್ನಲ್ಲಿ ಶೀರ್ಷಿಕೆಯಿಂದ ಸದ್ದು ಮಾಡ್ತಿರೋ ಸಿನಿಮಾ ಸಲಗ. ದುನಿಯಾ ವಿಜಯ್ ಫಸ್ಟ್ ಟೈಮ್ ನಿರ್ದೇಶನ ಮಾಡಿರೋ ಸಲಗ ಚಿತ್ರ, ಗೌರಿ ಗಣೇಶ ಹಬ್ಬಕ್ಕೆ ತೆರೆ ಕಾಣೋದಕ್ಕೆ ಸಜ್ಜಾಗಿದೆ. ಸದ್ಯ ಸಲಗ ಸಿನಿಮಾ ಸೆನ್ಸಾರ್ ಟೇಬಲ್ನಲ್ಲಿದ್ದು, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅಗಸ್ಟ್ 21ರಂದು ಸಿನಿಮಾವನ್ನ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಆಗಿರುವ ಪುನೀತ್ ರಾಜ್ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ಯುವರತ್ನ ಸದ್ಯಕ್ಕೆ ಟೀಸರ್ ನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಕೊರೊನಾ ಇಲ್ಲದಿದ್ರೆ ಯುವರತ್ನ ಸಿನಿಮಾ ಇಷ್ಟು ಹೊತ್ತಿಗೆ ರಿಲೀಸ್ ಆಗಬೇಕಿತ್ತು. ರಾಜಕುಮಾರ ಸಿನಿಮಾದ ಬಳಿಕ ಪವರ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳಿರುವ ಸಂತೋಷ್ ಆನಂದ್ ರಾಮ್, ಮತ್ತೊಂದು ಹಿಟ್ ಕೊಡಲು ರೆಡಿಯಾಗಿದ್ದಾರೆ.