ಕನ್ನಡ ಕಿರುತೆರೆಯ ಹಾಡಿನ ಶೋಗಳಲ್ಲೇ ಅಪ್ರತಿಮ, ಕಾರ್ಯಕ್ರಮ ಎನಿಸಿದ ಎದೆ ತುಂಬಿ ಹಾಡುವೆನು ಮತ್ತೆ ಶುರುವಾಗಲಿದೆ. ಈ ಜನಪ್ರಿಯ ಕಾರ್ಯಕ್ರಮ ಒಂಬತ್ತು ಸುದೀರ್ಘ ವರ್ಷಗಳ ವಿರಾಮದ ಬಳಿಕ ಇದೀಗ ಮತ್ತೆ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿದೆ.
ಎದೆ ತುಂಬಿ ಹಾಡುವೆನು ಎಂದಾಕ್ಷಣ ಮೊದಲಿಗೆ ನೆನಪಾಗೋದು ಹಿರಿಯ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ. ಆದರೆ ಅವರೀಗ ಇಲ್ಲ. ಹೀಗಾಗಿ ಕನ್ನಡ ಕಲರ್ಸ್ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್ ಮತ್ತು ಎಸ್ಪಿಬಿ ಅವರ ಮಗ ಎಸ್ ಪಿ ಚರಣ್ ಹಾಗೂ ತೀರ್ಪುಗಾರರಾಗಿ ಸಂಗೀತ ನಿರ್ದೇಶಕರಾದ ವಿ ಹರಿಕೃಷ್ಣ, ರಘು ದೀಕ್ಷಿತ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ವಿಜೇತರಿಗೆ 10 ಲಕ್ಷ ಬಹುಮಾನ: ಮೊದಲಿಗೆ ಮಾತನಾಡಿದ ಕನ್ನಡ ಕಲರ್ಸ್ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ ಗುಂಡ್ಕಲ್, ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೆ ಇಲ್ಲಿ ಹಾಡೋದಿಕ್ಕೆ ಅವಕಾಶ ಇದೆ. ಹಿಂದಿನ ಎದೆ ತುಂಬಿ ಹಾಡುವೆನು ಸಂಚಿಕೆಗಳಲ್ಲಿ ಎಸ್ಪಿಬಿ ಎದುರು ಹಾಡಿದ 60 ಹಳೆಯ ಗಾಯಕರು ಜ್ಯೂರಿ ರೂಪದಲ್ಲಿ ಆಡಿಷನ್ನಿನ ಭಾಗವಾಗಿರುವುದು ಮತ್ತೊಂದು ವಿಶೇಷ. ಮೆಗಾ ಆಡಿಷನ್ನಲ್ಲಿ 30 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಅದರಲ್ಲಿ ಹದಿನಾರು ಅತ್ಯುತ್ತಮ ಗಾಯಕರು ಶೋಗೆ ಆಯ್ಕೆಯಾಗಲಿದ್ದಾರೆ. 16 ವಾರಗಳ ಕಾಲ ಎದೆ ತುಂಬಿ ಹಾಡುವೆನು ಶೋ ನಡೆಯಲಿದ್ದು, ಕೊನೆಗೆ ವಿಜೇತರಿಗೆ 10 ಲಕ್ಷ ರೂ. ಬಹುಮಾನ ಕೂಡ ಇರುತ್ತೆ ಎಂದಿದ್ದಾರೆ.