ಪ್ರವಾಹಕ್ಕೆ ಸಿಕ್ಕಿ ನಲುಗುತ್ತಿರುವ ಉತ್ತರ ಕರ್ನಾಟಕದ ಜನರಿಗೆ ರಾಜ್ಯಾದ್ಯಂತ ಜನರು ನೆರವಿಗೆ ಧಾವಿಸಿದ್ದಾರೆ. ದುನಿಯಾ ವಿಜಯ್ ಅಭಿನಯದ 'ಸಲಗ' ಚಿತ್ರತಂಡ ಕೂಡಾ ನೆರೆಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ದುನಿಯಾ ವಿಜಯ್ 'ಸಲಗ' ಚಿತ್ರತಂಡ ಸಹಾಯಹಸ್ತ - ತೇಜಸ್ವಿನಿ ಅನಂತ್ ಕುಮಾರ್
ದುನಿಯಾ ವಿಜಯ್ ಅಭಿನಯದ 'ಸಲಗ' ಚಿತ್ರತಂಡ ಉತ್ತರ ಕರ್ನಾಟಕದ ನೆರೆಪೀಡಿತರಿಗೆ ನೆರವು ನೀಡಿದ್ದಾರೆ. ಪ್ರಹಾಹ ಸಂತ್ರಸ್ತರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಐದಾರು ಟ್ರಕ್ಗಳಲ್ಲಿ ತುಂಬಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳಿಸಿಕೊಟ್ಟಿದ್ದಾರೆ.
ಸುಮಾರು ಐದಾರು ಟ್ರಕ್ಗಳಲ್ಲಿ ಸಂತ್ರಸ್ತರಿಗಾಗಿ ಅಗತ್ಯ ದಿನಸಿ ಹಾಗೂ ಜಾನುವಾರುಗಳಿಗೆ ಮೇವುಗಳನ್ನು ತುಂಬಿಸಿ ಇಂದು ವಾಹನಗಳನ್ನು ಉತ್ತರ ಕರ್ನಾಟಕದತ್ತ ಹೊರಡಲು ನಟ ದುನಿಯಾ ವಿಜಯ್, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ತೇಜಸ್ವಿನಿ ಅನಂತ್ ಕುಮಾರ್ ಹಾಗೂ ಸಂಭಾಷಣೆಕಾರ ಮಾಸ್ತಿ ಚಾಲನೆ ನೀಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಟ ದುನಿಯಾ ವಿಜಯ್, ಭೀಕರ ಮಳೆಗೆ ನಮ್ಮ ಕರ್ನಾಟಕದ ಬಹುತೇಕ ಜಿಲ್ಲೆಗಳು ತತ್ತರಿಸಿವೆ. ಅಲ್ಲದೆ ಬಹುತೇಕ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಹಾಗಾಗಿ ಅಲ್ಲಿನ ಸಂತ್ರಸ್ತರಿಗೆ ಬೇಕಾದ ಅಗತ್ಯ ಸಾಮಾನುಗಳನ್ನು ತುಂಬಿದ ಟ್ರಕ್ಗಳು ಉತ್ತರ ಕರ್ನಾಟಕದ ಕಡೆಗೆ ಹೊರಟಿವೆ. ಅಲ್ಲದೆ ನೆಲಮಂಗಲದಿಂದ ಹಸುಗಳಿಗೆ ಬೇಕಾದಂತ ಮೇವುಗಳನ್ನು ಸಹ ಉತ್ತರ ಕರ್ನಾಟಕ ಹಾಗು ನೆರೆಪೀಡಿತ ಇತರ ಪ್ರದೇಶಗಳಿಗೆ ಕಳಿಸಿರುವುದಾಗಿ ವಿಜಯ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಶ್ರೀಕಾಂತ್, ನೆರೆ ಸಂತ್ರಸ್ತರಿಗೆ ನೆರೆವಾಗುವ ಉದ್ದೇಶದಿಂದ ನಟ ವಿಜಯ್ ಕಳೆದ ಒಂದು ವಾರದಿಂದ ತಾವೇ ಮುಂದೆ ನಿಂತು ಎಲ್ಲಾ ಕಾರ್ಯವನ್ನು ಮಾಡಿದ್ದಾರೆ. ಅಲ್ಲದೆ ಸಂತ್ರಸ್ತರಿಗೆ ಯಾವ ವಸ್ತುಗಳು ಅಗತ್ಯವಿದೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಎರಡು ದಿನ ಮುಂಚೆ ನಮ್ಮ ಒಂದು ತಂಡವನ್ನು ಅಲ್ಲಿಗೆ ಕಳಿಸಿ ಮಾಹಿತಿ ಸಂಗ್ರಹಿಸಿ ನಂತರ ಉತ್ತರ ಕರ್ನಾಟಕಕ್ಕೆ ಇಂದು ಅಗತ್ಯ ಸಾಮಗ್ರಿಗಳನ್ನು ಕಳಿಸುತ್ತಿದ್ದೇವೆ ಎಂದು ತಿಳಿಸಿದರು.