ದುನಿಯಾ ವಿಜಯ್ ಆ್ಯಕ್ಟಿಂಗ್ ಜೊತೆಗೆ ಮೊದಲ ಬಾರಿ ನಿರ್ದೇಶಿಸುತ್ತಿರುವ 'ಸಲಗ' ಸಿನಿಮಾ ಎರಡನೇ ಶೆಡ್ಯೂಲ್ ಮುಗಿಸಿದೆ. ಈ ಚಿತ್ರ ಭೂಗತ ಲೋಕದ ಕಥೆಯನ್ನು ಹೊಂದಿದೆ. ಎರಡನೇ ಶೆಡ್ಯೂಲ್ ಮುಗಿಸಿದ ಖುಷಿಯಲ್ಲಿ ಚಿತ್ರತಂಡ ಸಂಭ್ರಮ ಹಂಚಿಕೊಂಡಿದೆ.
ಎರಡನೇ ಶೆಡ್ಯೂಲ್ ಪೂರೈಸಿದ 'ಸಲಗ'... ಖುಷಿಯಿಂದ ಕುಣಿದಾಡಿದ ಚಿತ್ರತಂಡ - ಭೂಗತ ಲೋಕದ ಕಥೆ
ಎಸಿಪಿ ಪಾತ್ರಧಾರಿ ಧನಂಜಯ್ ರೌಡಿ ಸಲಗ ಪಾತ್ರಧಾರಿ ವಿಜಯ್ಗೆ ವಾರ್ನಿಂಗ್ ಮಾಡುವ ಸನ್ನಿವೇಶದ ಮೂಲಕ 'ಸಲಗ' ಚಿತ್ರತಂಡ ಎರಡನೇ ಶೆಡ್ಯೂಲ್ ಮುಗಿಸಿದೆ. ಕೆ.ಪಿ. ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಎರಡು ಹಾಡುಗಳು ಹಾಗೂ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ ಬಾಕಿ ಇವೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದು, ಅವರು ಎಸಿಪಿ ಪಾತ್ರದಲ್ಲಿ ಮಿಂಚಿದ್ದಾರೆ. ರೌಡಿ ಸಲಗನ ಪಾತ್ರದಲ್ಲಿ ವಿಜಯ್ ಅಭಿನಯಿಸಿದ್ದಾರೆ. ಎಸಿಪಿ ಧನಂಜಯ್ ಸಲಗ ವಿಜಯ್ಗೆ ವಾರ್ನಿಂಗ್ ಮಾಡುವ ದೃಶ್ಯವನ್ನು ನಿನ್ನೆ ಚಿತ್ರೀಕರಿಸಲಾಯಿತು. ನಿರ್ದೇಶಕ ವಿಜಯ್ ಬೆಂಗಳೂರಿನ ಹಳೆಯ ದರ್ಗಾ, ಮಸೀದಿ, ಸ್ಲಂ ಏರಿಯಾ ಸೇರಿದಂತೆ ಬೆಂಗಳೂರಿನ ಕೆಲವೊಂದು ಪ್ರಮುಖ ಸ್ಥಳಗಳಲ್ಲಿ ಸಿನಿಮಾ ಚಿತ್ರೀಕರಿಸಿದ್ದಾರೆ. ನಾಯಕಿ ಸಂಜನಾ ಕೂಡಾ ಈ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಎರಡನೇ ಶೆಡ್ಯೂಲ್ ಮುಗಿಸಿದ ಖುಷಿಯಲ್ಲಿ ಚಿತ್ರತಂಡ ಅರಚುತ್ತಾ, ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿತ್ರದ ಎರಡು ಹಾಡುಗಳು ಹಾಗೂ ಆ್ಯಕ್ಷನ್ ಸನ್ನಿವೇಶಗಳು ಬಾಕಿ ಇದ್ದು, ಫೇಮಸ್ ಸ್ಟಂಟ್ ನಿರ್ದೇಶಕರಾದ ರಾಮ, ಲಕ್ಷ್ಮಣ್ ಈ ಆ್ಯಕ್ಷನ್ ಸೀನ್ಗಳನ್ನು ಕಂಪೋಸ್ ಮಾಡಲು ವಿಜಯ್ ಮಾತುಕತೆ ನಡೆಸಿದ್ದಾರಂತೆ. 'ಟಗರು' ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಮಾಸ್ತಿ ಪಂಚಿಂಗ್ ಡೈಲಾಗ್ಗಳನ್ನು ಬರೆದಿದ್ದಾರೆ. ಚರಣ್ ರಾಜ್ ಹಾಗೂ ನವೀನ್ ಸಜ್ಜು ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆ.ಪಿ. ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.