ಬೆಂಗಳೂರು:ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದಪುರ ಪೊಲೀಸರು ನಿರ್ಮಾಪಕ ಶಂಕರೇಗೌಡ ಆಯೋಜಿಸಿದ್ದ ನೈಟ್ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದ ಆರೋಪದಡಿ ತೆಲುಗು ನಟ ತನೀಶ್ ಸೇರಿ ಐದು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ತೆಲುಗು ನಟ ತನೀಶ್, ಓರ್ವ ಉದ್ಯಮಿ, ನಿರ್ಮಾಪಕ ಸೇರಿದಂತೆ ಐವರಿಗೆ ಖುದ್ದು ಗೋವಿಂದಪುರ ಠಾಣೆ ಇನ್ಸ್ಪೆಕ್ಟರ್ ಆರ್. ಪ್ರಕಾಶ್ ಹೈದರಾಬಾದ್ ತೆರಳಿ ಮಾ.13ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಲಿದ್ದಾರೆ ಎನ್ನಲಾಗುತ್ತಿದೆ.
ವಿದೇಶಿ ಡ್ರಗ್ಸ್ ಪೆಡ್ಲರ್ನೊಂದಿಗೆ ಸಂಪರ್ಕದಲ್ಲಿದ್ದ ಶಂಕರೇಗೌಡ ತಮ್ಮ ನಿವಾಸದಲ್ಲಿ ನೈಟ್ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ಪಾರ್ಟಿಗೆ ತೆಲುಗು ನಟ ಸೇರಿದಂತೆ ಹಲವರನ್ನು ಆಹ್ವಾನಿಸುತ್ತಿದ್ದರು. ತೆಲುಗಿನ ಬಿಗ್ಬಾಸ್ ಸೀಸನ್- 2 ರಲ್ಲಿ ಸ್ಪರ್ಧಿಸಿದ್ದ ನಟ ತನೀಶ್ ಬಾಲನಟನಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು, ಇಪ್ಪತ್ತಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬ್ಯಾಂಡ್ ಬಾಜ, ಪಾಂಡವುಲು ಪಾಂಡವುಲು ತುಮ್ಮೆದ, ಏಮ್ ಪಿಲ್ಲೋ ಏಮ್ ಪಿಲ್ಲೋಡು, ನಚ್ಚಾವುಲೇ, ಕೋಡಿಪುಂಜಾ, ಮಂಚಿವಾಡು, ಚಾಣುಕ್ಯಡು, ತೆಲುಗಬ್ಬಾಯ್, ಸಲಾಮತ್, ದೇವದಾಸ್ ಸ್ಘೈಲ್ ಮಾರ್ಚೆಸ್ಯಾಡು, ಮೇಮ್ ವಯಸುಕು ವಚ್ಚಾಂ ಮೊದಲಾದ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ಶಂಕರೇಗೌಡನ ನಿವಾಸದ ಪಾರ್ಟಿಗಳಲ್ಲಿ ಅಟೆಂಡ್ ಆಗ್ತಿದ್ದ ತನೀಶ್ :
ಸಂಜಯನಗರದ ಶಂಕರೇಗೌಡ ಆಯೋಜನೆ ಮಾಡುತ್ತಿದ್ದ ಪಾರ್ಟಿಗಳಲ್ಲಿ ಆರೋಪಿಗಳಾದ ಮಸ್ತಾನ್ ಹಾಗೂ ವಿಕ್ಕಿ ಮಲ್ಹೋತ್ರ ಆಹ್ವಾನದಂತೆ ಬೆಂಗಳೂರಿಗೆ ಲೇಟ್ ನೈಟ್ ಪಾರ್ಟಿಗೆ ಬರುತ್ತಿದ್ದರು. ಡ್ರಗ್ಸ್ ಪೆಡ್ಲರ್ಗಳಾದ ಫಯೂಮ್ ಹಾಗೂ ಜಾನ್ನಿಂದ ಮಸ್ತಾನ್ ಚಂದ್ರ ಪಡೆಯುತ್ತಿದ್ದ ಡ್ರಗ್ಸ್ನ್ನು ಹೆಚ್ಚಿನ ಬೆಲೆಗೆ ತನೀಶ್ಗೆ ಪೆಡ್ಲಿಂಗ್ ನಡೆಸಿರುವ ಶಂಕೆ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ತನೀಶ್ ಹೆಸರು ತಳಕು ಹಾಕಿಕೊಳ್ತಿರೋದು ಇದೇ ಮೊದಲಲ್ಲ. ಕಳೆದ 2017 ರ ಜುಲೈನಲ್ಲಿ ಕ್ಯಾಲ್ವಿನ್ ಎಂಬ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದರು. ಡ್ರಗ್ ಪೆಡ್ಲರ್ ಕ್ಯಾಲ್ವಿನ್ ನಟ ತನೀಶ್ ಸೇರಿದಂತೆ ಹಲವರಿಗೆ ಡ್ರಗ್ಸ್ ಸರಬರಾಜು ಮಾಡಿರುವುದಾಗಿ ಬಾಯ್ಬಿಟ್ಟಿದ್ದರು. ಈ ಸಂಬಂಧ 2017ರ ಜುಲೈನಲ್ಲಿ ಹೈದರಾಬಾದ್ನ ಎಸ್ಐಟಿ ಮುಂದೆ ತನೀಶ್ ಹಾಜರಾಗಿದ್ದನು. ಮೂರೂವರೆ ವರ್ಷಗಳ ನಂತರ ಮತ್ತೆ ಡ್ರಗ್ಸ್ ಜಾಲದಲ್ಲಿ ನಟ ತನೀಶ್ ಹೆಸರು ತಳಕು ಹಾಕಿಕೊಂಡಿದೆ.
ವಿಕ್ಕಿ ಮಲ್ಹೋತ್ರ ಯಾರು ?:
ಪಂಜಾಬ್ ಮೂಲದ ವಿಕ್ಕಿ ಮಲ್ಹೋತ್ರ ನಗರದ ನೈಟ್ ಪಾರ್ಟಿ ಆಯೋಜನೆ ಮಾಡುತ್ತಿದ್ದನು. ಈತ ನಾಲ್ಕನೇ ಕ್ಲಾಸ್ ಓದಿದ್ದು, ಈವೆಂಟ್ ಮ್ಯಾನೇಜಮೆಂಟ್ ಮಾಡುತ್ತಿದ್ದನು. ಬೆಂಗಳೂರು ಫ್ಯಾಷನ್ ಎಂಟರ್ಟೇನಮೆಂಟ್ ಹೆಸರಲ್ಲಿ ಸೆಲೆಬ್ರೆಟಿಗಳಿಗೆ ಗಾಳ ಹಾಕುತ್ತಿದ್ದನು. ಹೋಟೆಲ್ನ ಫಸ್ಟ್ ಫ್ಲೋರ್ನಲ್ಲಿ ಫ್ಯಾಷನ್ ಈವೆಂಟ್ ನಡೆಯುತ್ತಿದ್ದರೆ, ಗ್ರೌಂಡ್ ಫ್ಲೋರ್ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜಿಸುತ್ತಿದ್ದನು. ಸೆಲೆಬ್ರೆಟಿಗಳನ್ನು ಫ್ಯಾಷನ್ ಈವೆಂಟ್ಗೆ ಗೆಸ್ಟ್ ಆಗಿ ಕರೆದು ಶ್ರೀಮಂತರು, ಉದ್ಯಮಿಗಳ ಮಕ್ಕಳನ್ನು ಆಕರ್ಷಿಸುತ್ತಿದ್ದನು. ಈತನ ಆಹ್ವಾನದ ಮೇರೆಗೆ ಕೆಲ ನಟ-ನಟಿಯರು ಕೇವಲ ಗೆಸ್ಟ್ ಆಗಿ ಬಂದು ಗೆಸ್ಟ್ ಆಗಿ ವಾಪಸ್ ತೆರಳುತ್ತಿದ್ದರು. ಆದರೆ ಕೆಲ ನಟ-ನಟಿಯರು ಫ್ಯಾಷನ್ ಈವೆಂಟ್ ಮುಗಿದ ಮೇಲೆ ಲೇಟ್ ನೈಟ್ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಪಾರ್ಟಿಯಲ್ಲಿ ಸೆಲೆಬ್ರೆಟಿ ಹಾಗೂ ಉದ್ಯಮಿಗಳ ಮಕ್ಕಳಿಗೆ ಡ್ರಗ್ಸ್ ಸಪ್ಲೈ ಆಗುತಿತ್ತು. ಸದ್ಯ ವಿಕ್ಕಿ ಮಲ್ಹೋತ್ರನನ್ನು ಗೋವಿಂದಪುರ ಠಾಣೆ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.