ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾದ ನಟಿಮಣಿಯರ ವಿಚಾರಣೆ ಇಂದೂ ಮುಂದುವರೆಯಲಿದೆ.
ಬಂಧಿತ ನಟಿ ರಾಗಿಣಿ ಕಸ್ಟಡಿ ಇಂದಿಗೆ ಹತ್ತು ದಿನವಾಗಿದ್ದು, ಸಂಜನಾ ಕಸ್ಟಡಿ 6 ದಿನವಾಗಿದೆ. ನಾಳೆಗೆ ಇಬ್ಬರ ಸಿಸಿಬಿ ಕಸ್ಟಡಿ ಅಂತ್ಯವಾಗಲಿದ್ದು, ಹೀಗಾಗಿ ಪೊಲೀಸರಿಗೆ ಇಂದು ಮಾತ್ರ ತನಿಖೆಗೆ ಅವಕಾಶವಿದೆ. ನಟಿಮಣಿಯರು ಮಹಿಳಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಲು ಹೋದಾಗ ಮೈ-ಕೈ ನೋವು, ಜ್ವರ, ಹೀಗೆ ಒಂದೊಂದೇ ನಾಟಕ ಆಡುತ್ತಿದ್ದು, ಇದು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ತಲೆನೋವಾಗಿದೆ.
ನಿನ್ನೆ ಕೂಡ ಜ್ವರ ನೆಪ ಹೇಳಿದ ಕಾರಣ, ಸಿಸಿಬಿ ಮಹಿಳಾಧಿಕಾರಿ ಇಬ್ಬರು ನಟಿಮಣಿಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೀಗೆ ಮುಂದುವರೆದರೆ ಕಸ್ಟಡಿ ಕೂಡ ವಿಸ್ತರಣೆಯಾಗುತ್ತದೆ ಎಂದು ಗದರಿದ್ದಾರೆಂಬ ಮಾಹಿತಿ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಹೀಗಾಗಿ ಸದ್ಯ ಇಬ್ಬರಲ್ಲಿ ಭಯ ಉಂಟಾಗಿದೆ, ಏಕೆಂದರೆ ನಾಳೆ ಇಬ್ಬರ ಕಸ್ಟಡಿ ಅಂತ್ಯವಾಗಲಿದೆ. ಇಂದು ವಿಚಾರಣೆಗೆ ಸರಿಯಾಗಿ ರೆಸ್ಪಾನ್ಸ್ ಮಾಡದಿದ್ದರೆ ಸಿಸಿಬಿ ಮತ್ತಷ್ಟು ದಿನ ವಿಚಾರಣೆಗೆ ತೆಗೆದುಕೊಳ್ಳಲು ನ್ಯಾಯಾಲಯದ ಎದುರು ಮನವಿ ಮಾಡಲಿದೆ.
ಒಂದು ವೇಳೆ ಸಾಕ್ಷಾಧಾರಗಳನ್ನ ಬಲವಾಗಿಸಿ ಕಸ್ಟಡಿ ಸಾಕು ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದರೆ, ನಟಿಮಣಿಯರು ಪರಪ್ಪನ ಅಗ್ರಹಾರ ಜೈಲು ಪಾಲಾಗಲಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಖೈದಿಗಳಂತೆ ಜೀವನ ನಡೆಸೋದು ಅನಿವಾರ್ಯವಾಗುತ್ತದೆ.