ತಮ್ಮ ಅಭಿನಯ ಹಾಗೂ ಸರಳ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಡಾ. ವಿಷ್ಣುವರ್ಧನ್ ಕನ್ನಡಿಗರ ಪಾಲಿನ ಆರಾಧ್ಯ ದೈವ. ಸಾಹಸಸಿಂಹ, ಕೋಟಿಗೊಬ್ಬ, ಅಭಿನಯ ಭಾರ್ಗವ, ದಾದಾ ಎಂದೆಲ್ಲಾ ಪ್ರೀತಿಯಿಂದ ಕರೆಸಿಕೊಳ್ಳುವ ಡಾ. ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅಭಿಮಾನಿಗಳು ಅವರನ್ನು ಇಂದಿಗೂ ಅವರನ್ನು ಆರಾಧಿಸುತ್ತಿದ್ದಾರೆ.
ಡಾ. ವಿಷ್ಣುವರ್ಧನ್ ಅವರನ್ನು ನಿಂದಿಸಿದ್ದ ತೆಲುಗು ನಟನ ಮೇಲೆ ಕ್ರಮ ಕೈಗೊಳ್ಳುವಂತೆ ಅನಿರುದ್ಧ್ ಮನವಿ
ಅಕ್ಟೋಬರ್ನಲ್ಲಿ ನಡೆದ ತೆಲುಗು ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ತೆಲುಗು ನಟ ವಿಜಯ್ ರಂಗರಾಜು, ಡಾ. ವಿಷ್ಣುವರ್ಧನ್ ಅವರನ್ನು ನಿಂದಿಸಿದ್ದು ಕೂಡಲೇ ಆತನ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಷ್ಣುವರ್ಧನ್ ಅಭಿಮಾನಿಗಳು ವಾಣಿಜ್ಯ ಮಂಡಳಿ ಮೊರೆ ಹೋಗಿದ್ದಾರೆ. ಜೊತೆಗೆ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಕೂಡಾ ವಿಜಯ್ ರಂಗರಾಜು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಅದ್ಭುತ ಅಭಿನಯ ಹಾಗೂ ತಮ್ಮ ಸ್ವಭಾವದಿಂದಲೇ ಹೃದಯವಂತ ಎನ್ನಿಸಿಕೊಂಡಿದ್ದ ಡಾ. ವಿಷ್ಣುವರ್ಧನ್ ಅವರಿಗೆ ತೆಲುಗು ಸಂದರ್ಶನವೊಂದರಲ್ಲಿ ಅಪಮಾನ ಮಾಡಲಾಗಿದ್ದು ನಿರೂಪಕ ಹಾಗೂ ನಟನ ಮೇಲೆ ಕ್ರಮ ಕೈಗೊಳ್ಳುವಂತೆ ವಿಷ್ಣುಸೇನೆ ಅಭಿಮಾನಿಗಳ ಸಂಘ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದೆ. ಅಕ್ಟೋಬರ್ನಲ್ಲಿ ತೆಲುಗು ಖಾಸಗಿ ವಾಹಿನಿಯೊಂದರಲ್ಲಿ ತೆಲುಗು ನಟ ವಿಜಯ್ ರಂಗರಾಜು ಸಂದರ್ಶನ ಏರ್ಪಡಿಸಲಾಗಿತ್ತು. ವಿಜಯ್ ರಂಗರಾಜು ಸಾಹಸ ಕಲಾವಿದನಾಗಿದ್ದು ತೆಲುಗು, ಕನ್ನಡ, ತಮಿಳು ಸೇರಿ ಇತರ ಭಾಷೆಗಳ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಕನ್ನಡ ಚಿತ್ರಗಳ ಬಗ್ಗೆ ಮಾತನಾಡುವಾಗ ಡಾ. ವಿಷ್ಣುವರ್ಧನ್ ಅವರನ್ನು ವಿಜಯ್ ರಂಗರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಇದರಿಂದ ನೋವಾಗಿದೆ. ಕೂಡಲೇ ಆ ನಟನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ಸಲ್ಲಿಸಲಾಗಿದೆ.
ಈ ಘಟನೆ ಬಗ್ಗೆ ಡಾ. ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪಾಜಿ ಎಲ್ಲರನ್ನೂ ಬಹಳ ಗೌರವದಿಂದ ಕಾಣುತ್ತಿದ್ದರು. ಎಷ್ಟೋ ಜನರಿಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಕರ್ನಾಟಕದ ಮೇರು ನಟರೊಬ್ಬರ ಬಗ್ಗೆ ಹೀಗೆ ಮಾತನಾಡಿರುವುದು ಕನ್ನಡಿಗರಿಗೆ ಮಾಡಿದ ಅಪಮಾನ.ಅಂತ ವ್ಯಕ್ತಿಯ ಬಗ್ಗೆ ವಿಜಯ್ ರಂಗರಾಜು ಹೀಗೆಲ್ಲಾ ಮಾತನಾಡಿರುವುದು ಸರಿಯಲ್ಲ. ನಿಧನರಾದ ವ್ಯಕ್ತಿಯ ಬಗ್ಗೆ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ, ತೆಲುಗು ಚಿತ್ರರಂಗ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ವಿಜಯ್ ರಂಗರಾಜು ಈ ವಿಚಾರವಾಗಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ.