ಡಾ ರಾಜಕುಮಾರ್ ಸರಳತೆ ಬಗ್ಗೆ ಅನೇಕ ಉದಾಹರಣೆಗಳಿವೆ. ಅವರ ಮಗ ರಾಘವೇಂದ್ರ ರಾಜ್ಕುಮಾರ್ ತಮ್ಮ ಅಪ್ಪಾಜಿ ನಿಧನ ಆದ ನಂತರ ಮಾಧ್ಯಮದ ಮುಂದೆ ಬಂದಾಗಲೆಲ್ಲ ಹೊಸ ವಿಚಾರವನ್ನು ತಿಳಿಸುತ್ತಾ ಇದ್ದಾರೆ. ಅದರೆ ಜೊತೆಗೆ ರಾಜ್ ಸಂಪರ್ಕದಲ್ಲಿದ್ದವರು ಕೂಡ ರಾಜಣ್ಣನ ಬಗ್ಗೆ ಅನೇಕ ವಿಚಾರಗಳನ್ನು ಹೇಳುತ್ತಲೇ ಬರುತ್ತಿದ್ದಾರೆ.
ಇಂದು ರಾಜ್ ಹುಟ್ಟುಹಬ್ಬವಿದ್ದು ನಿರ್ಮಾಪಕ ಹಾಗೂ ಡಾ ರಾಜಕುಮಾರ್ ಮನೆಯ ನಿಕಟ ವ್ಯಕ್ತಿ ಎನ್ ಎಸ್ ರಾಜಕುಮಾರ್ ಒಂದು ಅಪರೂಪದ ಘಟನೆಯನ್ನು ಹೇಳಿಕೊಂಡಿದ್ದಾರೆ. ಅದೇ ಡಾ ರಾಜಕುಮಾರ್ ಕೊಳೆತು ಹೋಗಿದ್ದ ಬಾಳೆ ಹಣ್ಣನ್ನು ತಿಂದ ಕಥೆ.
ವಿಷಯ ಏನಪ್ಪಾ ಅಂದರೆ ‘ಕವಿರತ್ನ ಕಾಳಿದಾಸ’ ಚಿತ್ರೀಕರಣ 1980 ರಲ್ಲಿ ಮದರಾಸಿನ ಪ್ರಸಾದ್ ಸ್ಟುಡಿಯೋ ಅಲ್ಲಿ ನಡೆದಿತ್ತು. ಎನ್ ಎಸ್ ರಾಜಕುಮಾರ್ ಆಗ ನಿರ್ಮಾಪಕ ವಿಕ್ರಮ್ ಶ್ರೀನಿವಾಸ್ ಜೊತೆ ಇದ್ದವರು ಮತ್ತೆ ಛಾಯಾಗ್ರಾಹಕ ವಿ ಕೆ ಕಣ್ಣನ್ಗೆ ಸಹಾಯಕರು.
ಒಂದು ದಿನ ಸುಡು ಸುಡು ಬಿಸಿಲಿನಲ್ಲಿ ರಾಯಚೂರಿನಿಂದ 70-80 ವ್ಯಕ್ತಿಗಳು ಒಂದು ಬಸ್ಸಿನಲ್ಲಿ ಮದರಾಸಿಗೆ ಬಂದು ಇಳಿದಿದ್ದರು. ಇವರಲ್ಲಿ ಹಲವಾರು ರೈತರು. ಇವರ ಒಂದೇ ಒಂದು ಉದ್ದೇಶ ಅವರ ಆರಾಧ್ಯ ದೈವ ಅಣ್ಣಾವ್ರನ್ನು ನೋಡಿ ಕಣ್ ತುಂಬಿಕೊಳ್ಳುವುದು.
ಈ ರೈತರು ತಮ್ಮನ್ನು ನೋಡಲು ಬಂದಿದ್ದಾರೆ ಎಂದು ತಿಳಿದ ತಕ್ಷಣ ಎಲ್ಲಾ ರೈತರನ್ನು ಬರಮಾಡಿಕೊಂಡು ರಾಜ್ ಕುಮಾರ್ ಮಾತನಾಡಿದ್ದಾರೆ.
ಆಗ ಬೇಸಿಗೆ ಕಾಲ. ಅಷ್ಟು ಜನರ ಪೈಕಿ ಒಬ್ಬ ವ್ಯಕ್ತಿ ತನ್ನ ಟವಲ್ನ ಪೇಟದಲ್ಲಿ ಒಂದು ಪಚ್ಚ ಬಾಳೆ ಹಣ್ಣನ್ನು ತೆಗೆದು ಅಣ್ಣಾವ್ರೆ ಇದು ನಮ್ಮ ತೋಟದಲ್ಲಿ ಬೆಳದದ್ದು ನಿಮಗಾಗಿ ತಂದಿದ್ದೇನೆ ಸ್ವೀಕರಿಸಿ ಎಂದಿದ್ದಾನೆ. ರೈತನು ರಾಯಚೂರಿನಿಂದ ಅಲ್ಲಿಗೆ ಬರುವಾಗ ಆ ಬಾಳೆ ಹಣ್ಣು ಕೊಳೆತು ಹೋಗಿತ್ತು. ಆದರೆ ಕಾಳಿದಾಸ ವೇಷದಲ್ಲಿದ್ದ ಡಾ ರಾಜಕುಮಾರ್ ಇದಕ್ಕೆ ಬೇಸರಿಸಿಕೊಳ್ಳದೆ ಆ ಬಾಳೆ ಹಣ್ಣನ್ನು ಅಲ್ಲಿಯೇ ಸುಲಿದು ಬಾಯಿಗೆ ಹಾಕಿಕೊಂಡು ಆಮೇಲೆ ಎಲ್ಲರನ್ನು ಬೀಳ್ಕೊಟ್ಟರು.
ಮರು ಕ್ಷಣವೇ ಅಲ್ಲಿದ್ದವರ ಪೈಕಿ ಒಬ್ಬರು ಅಣ್ಣಾವ್ರೆ ನೀವು ಅಷ್ಟು ಕೊಳೆತು ಹೋದ ಬಾಳೆ ಹಣ್ಣು ತಿಂದರಲ್ಲ, ನಿಮ್ಮ ಆರೋಗ್ಯ ಬಗ್ಗೆ ಏನಾಗಬಹುದು, ಅದು ಬೇಡವಾಗಿತ್ತು ಎಂದರು.
ಅಣ್ಣಾವ್ರು ತಕ್ಷಣವೇ ನಮ್ಮ ರೈತ ಅಷ್ಟೊಂದು ಪ್ರೀತಿಯಿಂದ ಕೊಟ್ಟಗ ಅದು ನನಗೆ ದೇವರ ಪ್ರಸಾದ ಇದ್ದ ಹಾಗೆ. ಆರೋಗ್ಯಕ್ಕೆ ಏನಾದರೂ ಆದರೆ ಆ ದೇವರಿದ್ದಾನೆ ಚಿಂತೆ ಮಾಡಬೇಡಿ, ಚಿತ್ರೀಕರಣ ಶುರು ಮಾಡಿ ಎಂದಿದ್ದಾರೆ.
ಈ ಕ್ಷಣ ನಿರ್ಮಾಪಕ ಎನ್ ಎಸ್ ರಾಜಕುಮಾರ್ ಅವರ ಮನಸಿನಲ್ಲಿ ಆಳವಾಗಿ ಅಚ್ಚಾಗಿ ಉಳಿದಿದೆ. ಇದಕ್ಕೆ ಹೇಳೋದು ಸಾರ್ ದೊಡ್ಡವರು ಅಂದರೆ ಅಣ್ಣಾವ್ರ ರೀತಿ ಇರಬೇಕು ಎಂದು ಅಂತ ಎನ್ ಎಸ್ ರಾಜಕುಮಾರ್ ನೆನೆಯುತ್ತಾರೆ.