ದ್ವಿಪಾತ್ರದ ಬಗ್ಗೆ ಗೊತ್ತಾ ಎಂದು ಕೇಳಿದರೆ ತುಂಬಾ ಸಿಲ್ಲಿ ಪ್ರಶ್ನೆ ಎಂದೆನಿಸುತ್ತದೆ. ಯಾಕೆಂದರೆ ವರನಟ ರಾಜ್ ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್ ಇವರೆಲ್ಲಾ ಬೆಳ್ಳಿತೆರೆಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈಗ ಇತಿಹಾಸ. ಆದರೆ ಈ ದ್ವಿಪಾತ್ರ ಎಂಬ ಕಾನ್ಸೆಪ್ಟ್ ಕಿರುತೆರೆಯನ್ನು ಕೂಡ ಬಿಟ್ಟಿಲ್ಲ. ಆದರೆ ಹಿರಿತೆರೆಯಷ್ಟು ದ್ವಿಪಾತ್ರಗಳು ಕಿರುತೆರೆಯಲ್ಲಿ ಕಾಣಿಸದಿದ್ದರೂ ಸದ್ದು ಮಾಡುತ್ತಿರುವುದಂತೂ ನಿಜ.
ಅನುಪಮಾ ಗೌಡ
ಮೊದಲ ಬಾರಿಗೆ ಕಿರುತೆರೆಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡವರೆಂದರೆ ಅನುಪಮಾ ಗೌಡ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮೆಗಾ ಧಾರಾವಾಹಿ ಅಕ್ಕದಲ್ಲಿ ಅನುಪಮಾ ಗೌಡ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದೇವಿಕಾ ಮತ್ತು ಭೂಮಿಕಾ ಎಂಬ ಪಾತ್ರಗಳಿಗೆ ಅನುಪಮಾ ಗೌಡ ಅವರು ಜೀವ ತುಂಬಿದ್ದು ಏಕಕಾಲಕ್ಕೆ ಪಾಸಿಟಿವ್ ಮತ್ತು ನೆಗೆಟಿವ್ ರೋಲ್ಗಳಿಗೆ ಜೀವ ತುಂಬಿದ ನಟಿ ಎಂಬ ಹೆಗ್ಗಳಿಕೆಗೂ ಕೂಡಾ ಅವರು ಪಾತ್ರರಾಗಿದ್ದರು. ಜೊತೆಗೆ ಆ ಪಾತ್ರಗಳು ಅನುಪಮಾಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
ಕಾವ್ಯ ಗೌಡ ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಆಗಿ ಗಮನ ಸೆಳೆದ ಕಾವ್ಯ ಗೌಡ ಅವರು ಕೂಡಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗಾಂಧಾರಿ ಧಾರಾವಾಹಿಯಲ್ಲಿ ದೀಪ್ತಿ ಮತ್ತು ದೃಷ್ಟಿಯಾಗಿ ಕಾವ್ಯ ಗೌಡ ನಟಿಸಿ ಸೈ ಎನಿಸಿಕೊಂಡಿದ್ದರು.
ತೇಜಸ್ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ತೇಜಸ್ ಗೌಡ ನಾಯಕನಾಗಿ ನಟಿಸಿದ್ದು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ ಮತ್ತು ಅಜಯ್ ಆಗಿ ತೇಜಸ್ ಗೌಡ ನಟಿಸುತ್ತಿದ್ದು ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿರುವ ತೇಜಸ್ ಗೌಡ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಮೀಕ್ಷಾ ಸೋಮವಾರದಿಂದ ಆರಂಭವಾದ ಮೂರು ಗಂಟು ಧಾರಾವಾಹಿಯಲ್ಲಿ ಸಮೀಕ್ಷಾ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂರು ಗಂಟು ಧಾರಾವಾಹಿಯಲ್ಲಿ ಶ್ರಾವಣಿ ಮತ್ತು ಪಾವನಿಯಾಗಿ ಸಮೀಕ್ಷಾ ಅವರು ನಟಿಸುತ್ತಿದ್ದು ಶ್ರಾವಣಿ ಲಂಗ ದಾವಣಿ ತೊಟ್ಟಿದ್ದರೆ, ಪಾವನಿ ಮಾಡರ್ನ್ ಅವತಾರದಲ್ಲಿ ಕಂಗೊಳಿಸುತ್ತಿದ್ದಾಳೆ.