'ಟಗರು' ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಡಾಲಿ ಧನಂಜಯ್ ಇದೀಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನಿನ್ನೆ ವರಮಹಾಲಕ್ಷ್ಮಿ ಹಬ್ಬದ ವಿಶೇಷ ದಿನದಂದು ಧನಂಜಯ್ ಹೊಸ ಚಿತ್ರದ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಕೈಯ್ಯಲ್ಲಿ ಹೂವು, ಮಿಠಾಯಿ ಹಿಡಿದು ಹೊಸ ಕನಸು ಕಾಣಲು ರೆಡಿಯಾದ ಡಾಲಿ - Ratnan prapancha poster released
ರೋಹಿತ್ ಪದಕಿ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಈ ಹೊಸ ಚಿತ್ರದ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದ್ದು ಚಿತ್ರಕ್ಕೆ 'ರತ್ನನ್ ಪ್ರಪಂಚ' ಎಂದು ಹೆಸರಿಡಲಾಗಿದೆ.
ಡಾನ್ ಜಯರಾಜ್, ಬಡವ ರ್‍ಯಾಸ್ಕಲ್ ಸಿನಿಮಾ ನಂತರ ಡಾಲಿ 'ರತ್ನನ್ ಪ್ರಪಂಚ' ಚಿತ್ರದಲ್ಲಿ ಹೊಸ ಕನಸು ಕಾಣಲು ರೆಡಿಯಾಗಿದ್ದಾರೆ. ಬಿಯರ್ ಬಾಟಲ್ ಹಿಡಿದು ರಾಕ್ಷಸನ ಅವತಾರದಲ್ಲಿ ಅಬ್ಬರಿಸಿದ್ದ ಮಂಕಿ ಸೀನ, ಈಗ ಕೈಯಲ್ಲಿ ಹೂವು, ಮಿಠಾಯಿ ಹಿಡಿದು ಹೊಸ ಗೆಟಪ್ನಲ್ಲಿ ಅಭಿಮಾನಿಗಳಿಗೆ ದರ್ಶನ ನೀಡಲು ರೆಡಿಯಾಗಿದ್ದಾರೆ. 'ಕೆಜಿಎಫ್' ಚಿತ್ರವನ್ನು ವಿತರಣೆ ಮಾಡಿದ್ದ ಕೆಆರ್ಜಿ ಸ್ಟುಡಿಯೋಸ್ ಈ ಚಿತ್ರದ ಮೂಲಕ ನಿರ್ಮಾಣಕ್ಕೂ ಕೈ ಹಾಕಿದೆ.
ಕಾರ್ತಿಕ್ ಗೌಡ ಹಾಗೂ ನಿರ್ದೇಶಕ ಯೋಗಿ ಜಿ. ರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ದಯವಿಟ್ಟು ಗಮನಿಸಿ' ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಪದಕಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ಧನಂಜಯ್, ರತ್ನಾಕರ ಎಂಬ ಹಳ್ಳಿ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಡಾಲಿ ಅಭಿಮಾನಿಗಳಲ್ಲಿ ಬಹಳ ಕುತೂಹಲ ಮೂಡಿಸಿರುವುದಂತೂ ನಿಜ.