ಕೆಲವು ವರ್ಷಗಳ ಹಿಂದೆ ಸತತವಾಗಿ ರೀಮೇಕ್ ಚಿತ್ರಗಳಲ್ಲಿ ನಟಿಸಿದ್ದ ಶಿವಣ್ಣ, ಇನ್ನು ಮುಂದೆ ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅದರಂತೆ ಸುಮಾರು15ಕ್ಕೂ ಹೆಚ್ಚು ವರ್ಷಗಳ ಕಾಲ ಅವರು ಯಾವೊಂದು ರೀಮೇಕ್ ಚಿತ್ರಗಳಲ್ಲೂ ನಟಿಸಿರಲಿಲ್ಲ. ಆದರೆ ಈಗ ಶಿವಣ್ಣ ಮತ್ತೆ ರೀಮೇಕ್ ಚಿತ್ರಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದಾರಾ ಎಂಬ ಪ್ರಶ್ನೆ ಬರುತ್ತದೆ.
ಮತ್ತೆ ರೀಮೇಕ್ ಸಿನಿಮಾಗಳತ್ತ ವಾಲುತ್ತಿದ್ದಾರಾ ಶಿವರಾಜ್‍ಕುಮಾರ್...? - Century star acting in Remake movies
ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ ಮತ್ತೆ ರೀಮೇಕ್ ಸಿನಿಮಾಗಳತ್ತ ವಾಲುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಕಳೆದ 2 ವರ್ಷಗಳಿಂದ ಬಿಡುಗಡೆಯಾದ 'ಕವಚ ', 'ದ್ರೋಣ ' ಸಿನಿಮಾಗಳು ರೀಮೇಕ್ ಆಗಿದ್ದು ಈಗ ನಟಿಸುತ್ತಿರುವ 123ನೇ ಚಿತ್ರ 'ಶಿವಪ್ಪ' ಕೂಡಾ ರೀಮೇಕ್ ಎಂಬ ಮಾತು ಕೇಳಿಬರುತ್ತಿದೆ.
ಕಳೆದ ವರ್ಷ ಬಿಡುಗಡೆಯಾದ 'ಕವಚ' ಚಿತ್ರವು ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ ಆಗಿತ್ತು. ಈ ವರ್ಷ ಬಿಡುಗಡೆಯಾದ 'ದ್ರೋಣ' ಚಿತ್ರವು ತಮಿಳಿನ 'ಸೆಟ್ಟೈ' ರೀಮೇಕ್ ಆಗಿತ್ತು. ಈಗ ಅವರ ಅಭಿನಯದ 'ಶಿವಪ್ಪ' ಸಿನಿಮಾ ಕೂಡಾ ತಮಿಳು ಚಿತ್ರವೊಂದರ ರೀಮೇಕ್ ಎಂದು ಹೇಳಲಾಗುತ್ತಿದೆ. ಆದರೆ ಗುರುವಾರವಷ್ಟೇ ಪ್ರಾರಂಭವಾದ 'ಶಿವಪ್ಪ' ಚಿತ್ರಕ್ಕೆ ನಿರ್ದೇಶಕ ವಿಜಯ್ ಮಿಲ್ಟನ್ ನಾನೇ ಕಥೆ ಬರೆದಿದ್ದೇನೆ ಎಂದು ಹೇಳುತ್ತಿದ್ದಾರೆ. ಇದು ನಿಜವಾದರೂ, ಈಗಾಗಲೇ ಅವರು ಆ ಕಥೆಯನ್ನಿಟ್ಟುಕೊಂಡು ಮೂರು ವರ್ಷಗಳ ಹಿಂದೆಯೇ ತಮಿಳಿನಲ್ಲಿ 'ಕಡುಗು' ಎಂಬ ಚಿತ್ರ ನಿರ್ದೇಶಿಸಿದ್ದರು. ರಾಜ್ಕುಮಾರ್, ಭರತ್, ಭರತ್ ಸೀನಿ ಮುಂತಾದವರು ನಟಿಸಿದ್ದ ಈ ಚಿತ್ರ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತಾದರೂ ದೊಡ್ಡ ಹಿಟ್ ಆಗಿರಲಿಲ್ಲ. ಈಗ ಅದೇ ಚಿತ್ರವನ್ನು ಅವರು ಕನ್ನಡದಲ್ಲಿ ಶಿವರಾಜ್‍ಕುಮಾರ್, ಧನಂಜಯ್ ಮತ್ತು ಪೃಥ್ವಿ ಅಂಬರ್ ಅಭಿನಯದಲ್ಲಿ ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಚಿತ್ರತಂಡದವರು ಮಾತ್ರ ಇದೊಂದು ರೀಮೇಕ್ ಎಂದು ಎಲ್ಲೂ ಹೇಳಿಕೊಂಡಿಲ್ಲ. ಇದೊಂದು ವಿಭಿನ್ನವಾದ ಕಥೆ ಇರುವ ಚಿತ್ರ ಎಂದಷ್ಟೇ ಹೇಳಿದ್ದಾರೆ. ಚಿತ್ರ ನಿಜಕ್ಕೂ ತಮಿಳಿನ 'ಕಡುಗು' ಚಿತ್ರದ ರೀಮೇಕಾ...ಇಲ್ಲವಾ ಎಂಬ ಸತ್ಯ ಚಿತ್ರ ಬಿಡುಗಡೆಯಾದ ಮೇಲೆ ಸಹಜವಾಗಿ ಎಲ್ಲರಿಗೂ ತಿಳಿಯಲಿದೆ.