'ತೋತಾಪುರಿ' ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ಜಗ್ಗೇಶ್ ಯಶಸ್ವಿಯಾಗಿ ಮುಗಿಸಿದ್ದಾರೆ. ಈ ಮೂಲಕ ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಒಂದು ಚಿತ್ರವನ್ನು ಅವರು ಯಶಸ್ವಿಯಾಗಿ ಮುಗಿಸಿದ್ದಾರೆ. ಮುಂದೇನು..? ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಉತ್ತರವೇನೋ ರೆಡಿಯಾಗಿದೆ. ಅದೇ ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ'.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ಕಳೆದ ವರ್ಷವೇ ಪ್ರಾರಂಭವಾಗಬೇಕಿತ್ತು. ಆದರೆ,ಕೊರೊನಾದಿಂದಾಗಿ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. ಈಗ ಮಾರ್ಚ್‍ನಿಂದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಚಿತ್ರ ನಿಜಕ್ಕೂ ಪ್ರಾರಂಭವಾಗುತ್ತದಾ ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಕೇಳಿಬರುತ್ತಿದೆ.ಇಂಥದ್ದೊಂದು ಪ್ರಶ್ನೆ ಕೇಳಿಬರುವುದಕ್ಕೆ ಕಾರಣ ನಿರ್ಮಾಪಕ ವಿಖ್ಯಾತ್. ಕೆಲವು ದಿನಗಳ ಹಿಂದೆ ನಡೆದಿದ್ದ ಜಗ್ಗೇಶ್ ಆಡಿಯೋ ವಿವಾದದಲ್ಲಿ ವಿಖ್ಯಾತ್ ಹೆಸರು ಕೂಡಾ ಕೇಳಿಬಂದಿತ್ತು. ಜಗ್ಗೇಶ್ ಮತ್ತು ವಿಖ್ಯಾತ್ ಇಬ್ಬರೂ ಮಾತನಾಡುವ ಒಂದು ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ತಾವು ಮಾತನಾಡಿರುವ ಆಡಿಯೋವನ್ನು ಜಗ್ಗೇಶ್ ರಿವೀಲ್ ಮಾಡಲು ಸಾಧ್ಯವಿಲ್ಲ. ಹಾಗಾದರೆ ಅದನ್ನು ವಿಖ್ಯಾತ್ ಅವರೇ ರಿವೀಲ್ ಮಾಡಿರಬಹುದು ಎಂಬ ಅನುಮಾನ ಎಲ್ಲರಿಗೂ ಕಾಡಿತ್ತು. ಆದರೆ ವಿಖ್ಯಾತ್ ಒಮ್ಮೆ ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದರು. ತನಿಖೆ ಎದುರಿಸಲೂ ಸಿದ್ಧ ಎಂದು ಹೇಳಿದ್ದರು.