ನಿನ್ನೆ ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸಿದ್ದಾರೆ. ಜನರು ವಿಘ್ನ ನಿವಾರಕ ಗಣಪ ಹಾಗೂ ಗೌರಿಯನ್ನು ಮನೆಗೆ ತಂದು ಅಲಂಕಾರ ಮಾಡಿ ಪೂಜಿಸಿದ್ದಾರೆ. ಬೀದಿ ಬೀದಿಗಳಲ್ಲಿ ಗಣೇಶನನ್ನು ಕೂರಿಸಿ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರೂ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಗಣೇಶೋತ್ಸವ ತಮಟೆ ಸದ್ದಿಗೆ ಕುಣಿದ ದೊಡ್ಮನೆ ಸಹೋದರರು, ಅನಾರೋಗ್ಯ ಲೆಕ್ಕಿಸದೆ ಸ್ಟೆಪ್ ಹಾಕಿದ ರಾಘಣ್ಣ - ಗಣೇಶ ಉತ್ಸವ
ನಿನ್ನೆ ಬೆಂಗಳೂರಿನ ಸದಾಶಿವನಗರದಲ್ಲಿ ನಡೆದ ಗಣೇಶ ಉತ್ಸವದಲ್ಲಿ ಡಾ. ರಾಜ್ಕುಮಾರ್ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದಾರೆ. ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಗುರುರಾಜ್ಕುಮಾರ್, ವಿನಯ್ ರಾಜ್ಕುಮಾರ್, ಧೀರೆನ್ ರಾಮ್ಕುಮಾರ್ ತಮಟೆ ಸದ್ದಿಗೆ ಸ್ಟೆಪ್ ಹಾಕಿದ್ದಾರೆ.

ಸಾಮಾನ್ಯ ಜನರು ಮಾತ್ರವಲ್ಲ ಸೆಲಬ್ರಿಟಿಗಳು ಕೂಡಾ ಈ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಕೆಲವರು ನಿನ್ನೆ ಸಂಜೆಯೇ ಗಣೇಶ ನಿಮಜ್ಜನ ಮಾಡಿದ್ದಾರೆ. ನಿನ್ನೆ ಸದಾಶಿವನಗರದಲ್ಲಿ ನಡೆದ ಗಣೇಶ ಹಬ್ಬದಲ್ಲಿ ದೊಡ್ಮನೆ ಮಕ್ಕಳು ಮೊಮ್ಮಕ್ಕಳು ಭಾಗಿಯಾಗಿದ್ದಾರೆ. ಸದಾಶಿವ ನಗರದ ಫ್ರೆಂಡ್ಸ್ ಅಸೋಸಿಯೇಷನ್ ತಂಡ ಆಯೋಜಿಸಿದ್ದ ಗಣಪತಿ ಉತ್ಸವದಲ್ಲಿ ಭಾಗಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಹಾಗೂ ಮೊಮ್ಮಕ್ಕಳಾದ ಗುರುರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಧಿರೇನ್ ರಾಮ್ ಕುಮಾರ್ ಭಾಗಿಯಾಗಿದ್ದಾರೆ. ಉತ್ಸವದಲ್ಲಿ ತಮಟೆ ಸದ್ದಿಗೆ ಎಲ್ಲರೂ ಸಖತ್ ಸ್ಟೆಪ್ ಹಾಕಿದ್ದಾರೆ. ನೂರಾರು ಅಭಿಮಾನಿಗಳೊಂದಿಗೆ ಸಾಮಾನ್ಯರಂತೆ ಬೆರೆತು ಈ ಸೆಲಬ್ರಿಟಿಗಳು ಕುಣಿದು ಕುಪ್ಪಳಿಸಿದ್ದಾರೆ. ವಿಶೇಷ ಅಂದರೆ ರಾಘಣ್ಣ ಕೂಡಾ ಕುಣಿದಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಕೂಡಾ ಖುಷಿಯಾಗಿದ್ದಾರೆ.