ತೆಲುಗಿನ ಖ್ಯಾತ ನಿರ್ಮಾಪಕ ಮತ್ತು ವಿತರಕರಲ್ಲಿ ಪೈಕಿ ದಿಲ್ ರಾಜು ಸಹ ಒಬ್ಬರು. ನಟ ಪುನೀತ್ ರಾಜಕುಮಾರ್ ಅವರ `ಯುವರತ್ನ' ಚಿತ್ರದ ನಿಜಾಮ್ ಪ್ರದೇಶದ ವಿತರಣೆಯ ಹಕ್ಕುಗಳನ್ನು ದಿಲ್ ರಾಜು ಪಡೆದಿದ್ದಾರೆ.
ಯುವರತ್ನ ಸಿನಿಮಾವು ಏಪ್ರಿಲ್ 1ರಂದು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಲಿದ್ದು, ತೆಲುಗು ವರ್ಷನ್‍ನ ನಿಜಾಮ್ ಪ್ರದೇಶದ ವಿತರಣೆಯ ಹಕ್ಕುಗಳನ್ನು ದಿಲ್ ರಾಜ್ ಒಡೆತನದ ಶ್ರೀ ವೆಂಕಟೇಶ್ವರ ಫಿಲಂಸ್ ಪಡೆದಿದೆ. ಬರೀ ದಿಲ್ ರಾಜು ಅಷ್ಟೇ ಅಲ್ಲ, ಆಂಧ್ರ ಮತ್ತು ತೆಲಂಗಾಣದ ಜನಪ್ರಿಯ ಚಿತ್ರವಿತರಣಾ ಸಂಸ್ಥೆಗಳು `ಯುವರತ್ನ' ಚಿತ್ರದ ತೆಲುಗು ವರ್ಷನ್‍ನ ವಿತರಣೆಯ ಹಕ್ಕುಗಳನ್ನು ಪಡೆದಿವೆ.
ವೈಜಾಗ್ ಪ್ರದೇಶದ ಹಕ್ಕುಗಳನ್ನು ವರಾಹಿ ಚಲನಚಿತ್ರಂ ಸಂಸ್ಥೆ ಪಡೆದರೆ, ನೆಲ್ಲೂರು ಪ್ರದೇಶದ ಹಕ್ಕುಗಳನ್ನು ಜೆಪಿಆರ್ ಫಿಲಂಸ್ ಸಂಸ್ಥೆ ಪಡೆದುಕೊಂಡಿದೆ. ಗುಂಟುರು, ಕೃಷ್ಣ, ಈಸ್ಟ್ ಗೋದಾವರಿ ಮತ್ತು ವೆಸ್ಟ್ ಗೋದಾವರಿ ಪ್ರದೇಶದ ಹಕ್ಕುಗಳನ್ನು ಕ್ರಮವಾಗಿ ಧನುಶ್ರೀ ಫಿಲಂಸ್, ಅನ್ನಪೂರ್ಣ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್, ಶ್ರೀ ಇಶ್ನಾ ಎಂಟಟೈನ್ಮೆಂಟ್ ಮತ್ತು ಮಹಿಕಾ ಮೂವೀಸ್ ಸಂಸ್ಥೆಯವರು ವಿತರಣೆಗೆ ಪಡೆದಿದ್ದಾರೆ.
ಇನ್ನು, ಕರ್ನಾಟಕದ ಮತ್ತು ಭಾರತದ ಇನ್ನಿತರ ಪ್ರದೇಶಗಳಿಗೆ ಆರ್‌ಜಿ ಸ್ಟುಡಿಯೋಸ್ ಸಂಸ್ಥೆಯು ವಿತರಣೆ ಮಾಡುತ್ತಿದೆ. ನಾರ್ಥ್ ಅಮೆರಿಕ ಮತ್ತು ಕೆನಡಾದ ಹಕ್ಕುಗಳನ್ನು ವೀಕೆಂಡ್ ಸಿನಿಮಾ ಪಡೆದರೆ, ಓವರ್‍ಸೀಸ್ ಹಕ್ಕುಗಳನ್ನು ಎಪಿ ಇಂಟರ್ನ್ಯಾಷನಲ್ ಸಂಸ್ಥೆಯು ಪಡೆದುಕೊಂಡಿದೆ. `ಯುವರತ್ನ' ಚಿತ್ರವು ಏಪ್ರಿಲ್ ಒಂದರಂದು ಏಕಕಾಲಕ್ಕೆ ಭಾರತವಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಬಿಡುಗಡೆಯಾಗುತ್ತಿದೆ.