ನಿರ್ದೇಶಕ ವಿಜಯಪ್ರಸಾದ್ ಅವರ ಚಿತ್ರಗಳಲ್ಲಿ ಡಬಲ್ ಮೀನಿಂಗ್ ಸಂಭಾಷಣೆಗಳು ಬಹಳ ಹೆಚ್ಚಿರುತ್ತವೆ ಎಂಬ ಮಾತು 'ಸಿದ್ಲಿಂಗು' ಕಾಲದಿಂದಲೂ ಕೇಳಿ ಬಂದಿವೆ. ಅದರಲ್ಲೂ ಕಳೆದ ವರ್ಷ 'ಪರಿಮಳ ಲಾಡ್ಜ್' ಚಿತ್ರದ ಟೀಸರ್ ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಆ ಟೀಸರ್ನಲ್ಲಿ ಸಿಕ್ಕಾಪಟ್ಟೆ ಡಬಲ್ ಮೀನಿಂಗ್ ಸಂಭಾಷಣೆಗಳನ್ನು ತುಂಬಿದ್ದು, ಆ ಬಗ್ಗೆ ವ್ಯಾಪಕ ಟೀಕೆ ಇತ್ತು.
ಆದರೆ, ಅದು ಡಬಲ್ ಮೀನಿಂಗ್ ಅಲ್ಲ, ಚೇಷ್ಟೆ ಎನ್ನುತ್ತಾರೆ ವಿಜಯಪ್ರಸಾದ್. 'ಪೆಟ್ರೋಮ್ಯಾಕ್ಸ್' ಚಿತ್ರದ ಮುಕ್ತಾಯದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಎಲ್ಲರೂ ನನ್ನ ಚಿತ್ರಗಳಲ್ಲಿ ಬಹಳ ಡಬಲ್ ಮೀನಿಂಗ್ ಸಂಭಾಷಣೆಗಳು ಇರುತ್ತವೆ ಎಂದು ಹೇಳಿದ್ದಾರೆ.
ನಾನದನ್ನು ಚೇಷ್ಟೆ ಅಂತಾ ಹೇಳೋಕೆ ಇಷ್ಟ ಪಡುತ್ತೇನೆ. ಮನರಂಜನೆಗೋಸ್ಕರ ಈ ಚೇಷ್ಟೆ ಇರುತ್ತದೆಯೇ ಹೊರತು, ಬೇರೆ ಯಾವುದೇ ಕಾರಣಕ್ಕೂ ಅಲ್ಲ. 'ನೀರ್‍ದೋಸೆ' ಚಿತ್ರವನ್ನೇ ತೆಗೆದುಕೊಂಡ್ರೆ, ಅಲ್ಲಿ ಬರೀ ಡಬಲ್ ಮೀನಿಂಗ್ ಸಂಭಾಷಣೆ ಇದ್ದಿದ್ದರೆ ಚಿತ್ರ ಫ್ಲಾಪ್ ಆಗಿರುತ್ತಿತ್ತು. ಅಲ್ಲೊಂದು ಗಾಢವಾದ ಕಥೆಯಿತ್ತು. ಅದೇ ಕಾರಣಕ್ಕೆ ಚಿತ್ರ ಗೆಲುವು ಖಂಡಿತು ಎಂದು ವ್ಯಾಖ್ಯಾನಿಸುತ್ತಾರೆ ವಿಜಯಪ್ರಸಾದ್.