ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಸುನಿಲ್ಕುಮಾರ್ ದೇಸಾಯಿ ಬಸವಳಿದಿದ್ದಾರೆ. ಅದಕ್ಕೆ ಕಾರಣ ‘ಉದ್ಘರ್ಷ’ ಸಿನಿಮಾದಲ್ಲಿ ಅವರಿಗಾದ ಸೋಲು. ಸುನಿಲ್ ಕುಮಾರ್ ದೇಸಾಯಿ ಹತ್ತಿರದಿಂದ ಬಲ್ಲವರ ಬಳಿ ಮಾತ್ರ ತಮ್ಮ ನೋವು ಹಾಗೂ ಸಂಕಷ್ಟ ತೋಡಿಕೊಳ್ಳುತ್ತಾರೆ.
ಈ ರೀತಿಯ ಸೋಲನ್ನು ನಾನೆಂದಿಗೂ ಕಂಡಿರಲಿಲ್ಲ: ಸುನಿಲ್ಕುಮಾರ್ ದೇಸಾಯಿ ನೋವು
ನಿರ್ದೇಶಕ ಸುನಿಲ್ಕುಮಾರ್ ದೇಸಾಯಿ ಇದೀಗ ಸಿಂಪಲ್ ಕಥೆಯನ್ನು ಆಯ್ಕೆ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾರಂತೆ. 'ಉದ್ಘರ್ಷ' ಸಿನಿಮಾದಿಂದ ಕಂಡ ಸೋಲನ್ನು ನಾನು ಈ ಹಿಂದೆ ಯಾವ ಸಿನಿಮಾದಲ್ಲೂ ಅನುಭವಿಸಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
‘ನನ್ನ ಸಿನಿಮಾ ಜೀವನದ 30 ವರ್ಷಗಳಲ್ಲಿ ‘ಉದ್ಘರ್ಷ’ ಚಿತ್ರದಿಂದ ಕಂಡ ಸೋಲನ್ನು ಈ ಹಿಂದೆ ಯಾವ ಚಿತ್ರದಲ್ಲೂ ಅನುಭವಿಸಿರಲ್ಲ. ಅದು ಒಂದು ರೀತಿಯಲ್ಲಿ ಬಾಕ್ಸ್ ಆಫೀಸಿನಲ್ಲಿ ಸಂಪೂರ್ಣ ವಾಷ್ ಔಟ್ ಆದ ಸಿನಿಮಾ. ಜನರು ಏಕೆ ಅದನ್ನು ತಿರಸ್ಕಾರ ಮಾಡಿದರು ಎಂಬುದು ನನಗೆ ತಿಳಿಯುತ್ತಿಲ್ಲ. ಆ ಸಿನಿಮಾಕ್ಕೆ ಹೆಚ್ಚು ಪರಿಶ್ರಮ ಹಾಕಿದ್ದೆ. ಸಿನಿಮಾ ಉದ್ಯಮದಲ್ಲಿ ಎಷ್ಟೋ ಮಂದಿಗೆ ಈ ರೀತಿ ಆಗಿದೆ. ಆದರೆ ನಾನು ವೃತ್ತಿರಂಗದಲ್ಲಿ ಬಹಳ ಕಷ್ಟದ ಸ್ಥಿತಿಯಲ್ಲಿ ಇರುವಾಗ ನನ್ನನ್ನು ನಂಬಿದ ನಿರ್ಮಾಪಕರಿಗೆ ಮೋಸ ಆಯಿತು. ಬಹುಶಃ ಸಿನಿಮಾ ಬಿಡುಗಡೆಗೆ ಮುಂಚೆಯೇ ನಾವು ವ್ಯಾಪಾರ ಮಾಡಿದ್ದರೆ ಅದು ಸ್ವಲ್ಪವಾದರೂ ಸೇಫ್ ಆಗುತ್ತಿತ್ತೇನೋ ಎಂಬ ಪಶ್ಚಾತ್ತಾಪ ಈಗ ಕಾಡುತ್ತಿದೆ. ನನ್ನ ಹಿಂದಿನ ಸಿನಿಮಾ ‘ರೇ’ ಗಿಂತ ಈ ‘ಉದ್ಘರ್ಷ’ ದೊಡ್ಡ ಲಾಸ್ ಆಯಿತು. ನಮ್ಮ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ಬಿತ್ತು ಎಂದು ದೇಸಾಯಿ ಹೇಳಿಕೊಳ್ಳುತ್ತಾರೆ.
ಇದೀಗ ತಮ್ಮ ಮುಂದಿನ ಸಿನಿಮಾಗೆ ಒಂದು ಸಿಂಪಲ್ ಕಥೆಯನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಸಮಯ ಹಾಗೂ ಹೆಚ್ಚು ಹಣ ಖರ್ಚು ಮಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ. ನಿರ್ಮಾಪಕರ ಹುಡುಕಾಟದಲ್ಲಿದ್ದೇನೆ. ಆದಷ್ಟು ಬೇಗ ಇದರ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಸುನಿಲ್ಕುಮಾರ್ ದೇಸಾಯಿ ಹೇಳಿದ್ದಾರೆ.