`ಮೊಗ್ಗಿನ ಮನಸ್ಸು' ನಂತರ ಖ್ಯಾತ ನಿರ್ದೇಶಕ ಶಶಾಂಕ್ ಹೊಸಬರ ಜೊತೆಗೆ ಸಿನಿಮಾ ಮಾಡಿರಲೇ ಇಲ್ಲ. ಅವಕಾಶ ಸಿಕ್ಕರೆ ಹೊಸಬರ ಜೊತೆಗೆ ಒಂದು ಚಿತ್ರ ಮಾಡುವುದಾಗಿ ಹೇಳಿದ್ದರು. ಅದೀಗ ಕಾರ್ಯರೂಪಕ್ಕೆ ಬರುತ್ತಿದೆ.
ಏಪ್ರಿಲ್‌ನಲ್ಲಿ ಉಪೇಂದ್ರ ಮತ್ತು ಹರಿಪ್ರಿಯಾ ಅಭಿನಯದ ಹೊಸ ಚಿತ್ರವೊಂದನ್ನು ಆರಂಭಿಸುವುದಾಗಿ ಶಶಾಂಕ್ ಘೋಷಿಸಿದ್ದರು. ಆದರೆ, ಆ ಚಿತ್ರ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಅವರು ತಮ್ಮ ಶಶಾಂಕ್ ಸಿನಿಮಾಸ್ ಸಂಸ್ಥೆಯಡಿ ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು, ಶಶಾಂಕ್ ಅವರೇ ನಿರ್ದೇಶಿಸುತ್ತಿದ್ದಾರೆ. ಲಾಕ್‌ಡೌನ್‌ಗೂ ಮುನ್ನವೇ ಈ ಚಿತ್ರಕ್ಕೆ ಸರಳವಾಗಿ ಪೂಜೆ ನೆರವೇರಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರೀಕರಣ ಶುರುವಾಗುವ ಸಾಧ್ಯತೆ ಇದೆ.
ಅಂದಹಾಗೆ, ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಹೊಸಪೇಟೆ ಮೂಲದವರಾದ ಪ್ರವೀಣ್, ನಟನಾಗುವ ಆಸಕ್ತಿಯಿಂದ ಎಲ್ಲ ತರಬೇತಿ ಪಡೆದುಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಇದೊಂದು ಭಾವುಕ ಪ್ರೇಮಕಥೆಯಾಗಿದ್ದು, ಶಶಾಂಕ್ ಹೊಸ ನಾಯಕಿಯೊಬ್ಬರ ಹುಡುಕಾಟದಲ್ಲಿದ್ದಾರೆ. ಲಾಕ್‌ಡೌನ್ ಮುಗಿದ ನಂತರ ಫೋಟೋಶೂಟ್ ಮಾಡಿ, ಚಿತ್ರದ ಶೀರ್ಷಿಕೆಯ ಜೊತೆಗೆ ಫಸ್ಟ್ ಲುಕ್ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ. ಈ ಚಿತ್ರದ ಚಿತ್ರೀಕರಣ ಜೂನ್‌ನಲ್ಲಿ ಪ್ರಾರಂಭವಾಗಲಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಮಿಕ್ಕಂತೆ ಚಿತ್ರದ ಇತರೆ ಕಲಾವಿದರ ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ.
ಇದನ್ನೂ ಓದಿ:ಕೋವಿಡ್ ಸೋಂಕು ತಗುಲಿ ಸ್ಯಾಂಡಲ್ವುಡ್ ನಿರ್ಮಾಪಕ ಚಂದ್ರಶೇಖರ್ ನಿಧನ