ಬೆಂಗಳೂರು:ನಿರ್ದೇಶಕ ಎಸ್.ನಾರಾಯಣ್ ಅವರು ಈ ಹಿಂದೆ ಹಣ ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿಂದೆ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಿಸಿಬಿಗೆ ಹಸ್ತಾಂತರವಾಗಿತ್ತು. ಕನ್ನಡದಲ್ಲಿ ನಿರ್ಮಾಪಕ, ನಿರ್ದೇಶಕ, ನಟರಾಗಿ ಗುರುತಿಸಿಕೊಂಡಿರುವ ಎಸ್. ನಾರಾಯಣ್ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದರು. ನಾಲ್ವರು ನಿರ್ಮಾಪಕರು ಸೇರಿ ನಿರ್ಮಿಸಬೇಕಿದ್ದ ಆ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು. ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಇಂದು ಆಗಮಿಸಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ನಾರಾಯಣ್, ಈ ಹಿಂದೆ ಸಿನಿಮಾ ಮಾಡೋಣ ಎಂದು ನಾಲ್ವರು ಆರೋಪಿಗಳು ನಂಬಿಸಿದ್ದರು. ಇದರಂತೆ ನಾಲ್ಕು ದಿನಗಳ ಕಾಲ ಶೂಟಿಂಗ್ ಆಗಿತ್ತು. ಬಳಿಕ ನಿಂತು ಹೋಗಿತ್ತು. ಹಣಕಾಸಿನ ಮುಗ್ಗಟ್ಟಿನಿಂದ ನಮ್ಮ ಬಳಿ ಸೈಟ್ ಇದ್ದು ಅದನ್ನು ಮಾರಿ ಸಿನಿಮಾ ಮಾಡೋಣ ಎಂದು ಆರೋಪಿಗಳು ಭರವಸೆ ನೀಡಿದ್ದರು. ವಿವಿಧ ತಾಂತ್ರಿಕ ಸಮಸ್ಯೆಗಳನ್ನು ಹೇಳಿ ನನಗೆ ನಿವೇಶನ ಖರೀದಿಸುವಂತೆ ಹೇಳಿದ್ದರು. ಇದನ್ನು ನಂಬಿ ಬ್ಯಾಂಕ್ನಿಂದ ಸಾಲ ಪಡೆದು ಸೈಟ್ ಖರೀದಿಸಿದ್ದೆ. ಹಣ ಪಡೆದುಕೊಂಡ ಆರೋಪಿಗಳು ಸಿನಿಮಾ ಶುರು ಮಾಡದೆ, ಹಣ ನೀಡದೆ ಸತಾಯಿಸುತ್ತಿದ್ದರು ಎಂದು ಹೇಳಿದರು.