ದಕ್ಷಿಣ ಭಾರತದ ಅತೀ ದೊಡ್ಡ ಸಿನಿಮಾ ಪ್ರಶಸ್ತಿ 'ಸೈಮಾ' ವಿರುದ್ಧ ಸ್ಯಾಂಡಲ್ವುಡ್ ಸಿನಿಮಾ ನಿರ್ದೇಶಕ ರಘುರಾಮ್ ಅಸಮಾಧಾನಗೊಂಡಿದ್ದಾರೆ.
ನಿನ್ನೆಯಷ್ಟೆ ಕತಾರ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೆಜಿಎಫ್ ಚಿತ್ರಕ್ಕೆ ಒಟ್ಟು 8 ಪ್ರಶಸ್ತಿಗಳು ಸಿಕ್ಕಿವೆ. ಮಿಕ್ಕಂತೆ ಟಗರು ಚಿತ್ರದ ನೆಗೆಟಿವ್ ರೋಲ್ಗೆ ಡಾಲಿ ಧನಂಜಯ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಶಿವಣ್ಣ ನಟಿಸಿರುವ ಟಗರು ಸಿನಿಮಾ ಕೂಡ ಒಂದು. ಆದರೆ, ಈ ಚಿತ್ರಕ್ಕೆ ಕೇವಲ ಒಂದೇ ಪ್ರಶಸ್ತಿ ಲಭಿಸಿರುವುದು ಮಿಸ್ಸಿಂಗ್ ಬಾಯ್ ಡೈರೆಕ್ಟರ್ ರಘುರಾಮ್ ಅವರ ಬೇಸರ ಹಾಗೂ ಕೋಪಕ್ಕೆ ಕಾರಣವಾಗಿದೆ.
ತಮ್ಮ ಟ್ವಿಟ್ಟರ್ಲ್ಲಿ ಸೈಮಾ ಪ್ರಶಸ್ತಿ ಆಯ್ಕೆತಂಡದ ವಿರುದ್ಧ ಆಕ್ರೋಶ ಹೊರಹಾಕಿರುವ ರಘುರಾಮ್, ಪ್ರಶಸ್ತಿ ಕೊಡುವುದು ವ್ಯವಹಾರವಾದಂತಾಗಿದೆ. ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ ಟಗರು ಚಿತ್ರಕ್ಕೆ, ಹಾಡಿಗೆ, ಹಾಡುಗಾರನಿಗೆ, ಸಂಗೀತ ನಿರ್ದೇಶಕನಿಗೆ, ಚಿತ್ರಕಥೆಗೆ ಗುರುತು ಗೌರವ ಸಿಗದೇ ಇರುವುದಕ್ಕೆ ಕಾರಣ ಸೈಮಾ ಅವರ ಪಕ್ಷಪಾತದ ನಿರ್ಧಾರ ಎಂದು ಟೀಕಿಸಿದ್ದಾರೆ.
ಇನ್ನು ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದಲ್ಲಿ ಹಾಸ್ಯ ನಟನೆಗೆ ಪ್ರಕಾಶ್ ತುಮಿನಾಡ್, ಅತ್ಯುತ್ತಮ ಚೊಚ್ಚಲ ನಟಿಯಾಗಿ ಅನುಪಮಾ ಗೌಡ (ಆ ಕರಾಳ ರಾತ್ರಿ), ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ ಮಹೇಶ್ ಕುಮಾರ್ (ಅಯೋಗ್ಯ), ಅತ್ಯುತ್ತಮ ಸಾಹಿತ್ಯ; ಚೇತನ್ ಕುಮಾರ್ (ಅಯೋಗ್ಯ- ಏನಮ್ಮಿ ಏನಮ್ಮಿ), ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನನ್ಯ ಭಟ್ (ಟಗರು- ಹೋಲ್ಡ್ ಆನ್ ಹೋಲ್ಡ್ ಆನ್) ಪ್ರಶಸ್ತಿ ಪಡೆದಿದ್ದಾರೆ.