ಕರ್ನಾಟಕ

karnataka

ETV Bharat / sitara

ಕಾರ್ನಾಡರ ಜೊತೆ ಕಠೋರ ಪತ್ರ ವ್ಯವಹಾರ ಇತ್ತು: ನಾಗತಿಹಳ್ಳಿ ಚಂದ್ರಶೇಖರ್​ - undefined

ಗಿರೀಶ್ ಕಾರ್ನಾಡ್ ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮೆಲುಕಿ ಹಾಕಿ, ಕಾರ್ನಾಡರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

By

Published : Jun 11, 2019, 2:26 AM IST

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷಾದ ವ್ಯಕ್ತಪಡಿಸಿದ್ದು, ಕಾರ್ನಾಡರ ಜೊತೆಗಿನ ಕೆಲವು ಘಟನೆಗಳನ್ನು ಈಟಿವಿ ಭಾರತ್ ಜೊತೆ ಮೆಲುಕು ಹಾಕಿದ್ದಾರೆ.

ಕಾರ್ನಾಡರು ವಿಭಿನ್ನವಾದ ಕನಸಿನ‌ ಜಾಡಿನಲ್ಲಿದ್ದಂತಹ ನಾಟಕಕಾರ,‌ ಯಯಾತಿ, ತಲೆದಂಡ, ತುಘಲಕ್ ನಾಟಕಗಳು ಶ್ರೇಷ್ಠ ನಾಟಕಗಳು. ಅಲ್ಲದೆ ಈ ನಾಟಕಗಳನ್ನು ನಾನು ಹಲವು ವರ್ಷಗಳು ಪಾಠ ಮಾಡಿದ್ದೇನೆ. ಅಲ್ಲದೆ ಕಾರ್ನಾಡರ ನಾಟಕಗಳು ರಂಗ ಪರದೆಯ ಮೇಲೆ ಪ್ರದರ್ಶನವಾದಾಗ ಮೆಚ್ಚಿದ್ದೇವೆ. ಗಿರೀಶ್ ಕಾರ್ನಾಡರು ಹಾಗೂ ಅರುಂಧತಿ ನಾಗ್ ಅವರ ಪ್ರಯತ್ನದ ಫಲವೇ ರಂಗಶಂಕರ. ಶಂಕರ್ ನಾಗ್ ಅವರ ನೆನಪಿನಲ್ಲಿ ಸ್ಥಾಪಿಸಿದ ರಂಗಶಂಕರ, ಇಂದು ಸಾಂಸ್ಕೃತಿಕ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕಿರಿಯನಾಗಿದ್ದರೂ ಸಹ ಸೋಲೊಪ್ಪಿಕೊಳ್ಳದೆ ಪ್ರತಿಭಟಿಸುತ್ತಿದ್ದೆ:

ಪ್ರಸ್ತುತ ಸಮಾಜದಲ್ಲಿ ನಮಗೆ ಒಬ್ಬ ವ್ಯಕ್ತಿಯ ಸಾವಿನ‌ ನಂತರ ಕೆಲವು ಪ್ರಶ್ನೆಗಳುವ ಮೂಡುತ್ತವೆ, ಏನನ್ನು ಬಿಟ್ಟು ಹೋದ ಎಂದು. ಹೀಗೆ ಯೋಚಿಸಿದರೆ ಗಿರೀಶ್ ಕಾರ್ನಾಡರು ಅದ್ಭುತವಾದ ನಾಟಕಗಳನ್ನು ಕೊಟ್ಟು ಹೋಗಿದ್ದಾರೆ, ಆ ನಾಟಕಗಳಿಗೆ ಸಾವಿಲ್ಲ. ಕಾರ್ನಾಡರು ಪಾಶ್ಚಾತ್ಯ ರಂಗಭೂಮಿಯಿಂದ ಪ್ರಭಾವಿತರಾಗಿದ್ದರು. ಕನ್ನಡ ಜನಪದ, ಕನ್ನಡ ಪುರಾಣ, ಕನ್ನಡ ಮಹಾಕಾವ್ಯ, ಚರಿತ್ರೆ, ಟಿಪ್ಪು, ಬಸವಣ್ಣನವರ ಬಗ್ಗೆ ಹಾಗೂ ಯಯಾತಿ ಬಗ್ಗೆ ಬರೆಯುತ್ತಾರೆ. ತುಂಬಾ ಪ್ರಯೋಗಶೀಲರಾದ ಕಾರ್ನಡರು, ವಿಭಿನ್ನವಾದ, ವಿಶೇಷವಾದ, ಕೊಂಚ ವಿಲಕ್ಷಣವಾದಂತಹ ವ್ಯಕ್ತಿಯಾಗಿದ್ದರು. ಅಲ್ಲದೆ ನನಗೂ ಕಾರ್ನಾಡರಿಗೂ ಕೆಲವು ಸಲ ಜಗಳವಾಗ್ತಿತ್ತು. ಜಗಳ ಅಂದ್ರೆ ಎಡಬಲ ಜಗಳವಲ್ಲ, ಸೈದ್ದಾಂತಿಕ ಜಗಳವಲ್ಲ, ಬದಲಾಗಿ ಸಾಹಿತ್ಯಕ್ಕೆ ಸಂಬಂಧಿಸಿದ ಜಗಳ. ಕಾರ್ನಾಡರು ಯಾವುದೇ ವಿಷಯಕ್ಕಾಗಲಿ ತಕ್ಷಣ ರಿಯಾಕ್ಟ್ ಮಾಡ್ತಿದ್ರು, ತಪ್ಪು ತಿಳಿಯುತಿದ್ರು, ಆದ್ರೆ ನಾನು ಕಿರಿಯನಾಗಿದ್ದರೂ ಸಹ ಸೋಲೊಪ್ಪಿಕೊಳ್ಳದೆ ಪ್ರತಿಭಟಿಸುತ್ತಿದ್ದೆ. ಹೀಗಾಗಿ ನನ್ನ ಅವರ ಜೊತೆ ಕಠೋರವಾದ ಪತ್ರವ್ಯವಹಾರ ಇತ್ತು.

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಇದಲ್ಲದೆ ‌80ರ ದಶಕದಲ್ಲಿ ಕಾರ್ನಾಡರು ನಟಿಸಿದ್ದ, ಕಾಡಿನ ಬೆಂಕಿ ಹಾಗೂ ಪ್ರಥಮ ಉಷಾಕಿರಣ ಎಂಬ ಚಿತ್ರಗಳಲ್ಲಿ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಕಾರ್ನಾಡರು ಕಲಾತ್ಮಕ ಚಿತ್ರಗಳ ರೂವಾರಿಯಾಗಿದ್ದರು, ಜೊತೆಗೆ ಮನರಂಜನೆಯ ಚಿತ್ರಗಳಲ್ಲಿ ನಟಿಸಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಲೇಖಕರಾಗಿದ್ದರು. ನಾವು ಯಾವುದೇ ದೇಶದ ಗ್ರಂಥಾಲಯಕ್ಕೆ ಹೋದರೂ ಕನ್ನಡ ಲೇಖಕರ ಪಟ್ಟಿಯಲ್ಲಿ ಕಾರ್ನಾಡರ ಹೆಸರು ಇರುತಿತ್ತು. ಕಾರ್ನಾಡರು ದೆಹಲಿ, ಲಂಡನ್​ನಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದ್ದರು. ಹೀಗಾಗಿ ಕಾರ್ನಾಡರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ರು.

ಅವರು ನಂಬಿದಂತಹ ನಂಬಿಕೆಗಳನ್ನು ಬಹಳ ನಿಷ್ಠುರವಾಗಿ ಪ್ರತಿಪಾದಿಸುತ್ತಿದ್ದರು, ವಾಗ್ವಾದ ಸೃಷ್ಟಿಸಿಕೊಂಡಿದ್ದರು, ಇದರಿಂದ ಅವರಿಗೆ ಶತ್ರುಗಳಿದ್ದರು. ಆದರೆ ಸಾಹಿತ್ಯ ಯಾವಾಗಲು ಒಂದು ಮಾತು ಹೇಳುತ್ತೆ‌, ನೀನು ನಿಷ್ಠುರವಾಗಿರು, ನಿನಗೆ ಅನಿಸಿದ್ದನ್ನು ಹೇಳು, ನೀನು ಅಲ್ಪಸಂಖ್ಯಾತನಾದರೂ ಗೊತ್ತಿರುವುದನ್ನು ಗಟ್ಟಿಯಾಗಿ ಹೇಳು, ಸಮೂಹ ಸನ್ನಿಯಲ್ಲಿ ಕರಗಿ ಹೋಗಬೇಡ, ಜೈಕಾರ ಹಾಕುವ ಜನರ ಗುಂಪಿನಿಂದ ಹೊರಬಂದು ಪ್ರಶ್ನಿಸು. ಪ್ರಶ್ನೆ, ಪ್ರತಿಭಟನೆ ಇದ್ರೆ ಪ್ರಜಾಸತ್ಯ ಉಳಿಯುತ್ತೆ, ಇದನ್ನೇ ಬಸವಣ್ಣ-ಪಂಪ ಮಾಡಿದ್ರು.ಈ ಗುಂಪಿಗೆ ಕಾರ್ನಾಡರು ಸೇರಿದವರಾಗಿದ್ದರು.

ಅವರು ಇಂದು ನಿಧನರಾಗಿದ್ದಾರೆ, ಅವರು ಸಾವಿನಲ್ಲೂ ಸಂಪ್ರದಾಯಕ್ಕೆ ಒಳಗಾಗದೆ ಸಾವನ್ನು ಸಹಜ ಸ್ಥಿತಿ ಎಂದು ಸ್ವೀಕರಿಸಿರುವುದು ಗೋಚರಿಸುತ್ತದೆ. ಈಗ ಕಾರ್ನಾಡರು ನಮ್ಮ ಜೊತೆ ಇಲ್ಲ, ಅವರು ಬಿಟ್ಟು ಹೋದ ಆಶಯಗಳನ್ನು ನಮ್ಮ ಮುಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ಕಾರ್ನಾಡರ ನಿಧನಕ್ಕೆ ಸಂತಾಪ ಸೂಚಿಸಿದರು.

For All Latest Updates

TAGGED:

ABOUT THE AUTHOR

...view details