ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ತಾನ್ಯಾಹೋಪ್ ನಟಿಸಿರೋ 'ಅಮರ್' ಚಿತ್ರ ಇದೇ ಮೇ 31ರಂದು ರಾಜ್ಯಾದ್ಯಂತ 300ಕ್ಕೂ ಹಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣ್ತಿದೆ ಎಂದು ನಿರ್ದೇಶಕ ನಾಗಶೇಖರ್ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಚಿತ್ರತಂಡದ ಮಾಧ್ಯಮಗೋಷ್ಠಿ ನಡೆಸಿ ಮಾತಾಡಿದ ಅವರು, ಸುಮಾರು 87 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರೂಪ್ ಭಂಡಾರಿ, ರಚಿತಾ ರಾಮ್, ದೇವರಾಜ್ ಸೇರಿದಂತೆ ಬಹುತೇಕರು ಕಾಣಿಸಿಕೊಂಡಿದ್ದಾರೆ. ಇದು ಲವ್ ಸ್ಟೋರಿ ಸಿನಿಮಾವಾಗಿದ್ದು, ರವಿಚಂದ್ರನ್- ಜೂಹಿ ಚಾವ್ಲಾರನ್ನು ನೆನಪಿಸುವ ಮಟ್ಟಿಗೆ ಚಿತ್ರ ಸಿದ್ಧವಾಗಿದೆ ಎಂದರು.
ಚಿತ್ರದಲ್ಲಿ ಅಂಬಿಯಣ್ಣನ ಪ್ರಭಾವ ಜಾಸ್ತಿಯಿದೆ. ಯಾಕಂದ್ರೆ ಚಿತ್ರೀಕರಣದ ವೇಳೆ ತಮ್ಮ ಮಗನ ವೀಕ್ನೆಸ್ ಏನು ಅನ್ನೋದನ್ನು ತಿಳಿಸಿಕೊಟ್ಟಿದ್ರು. ವಾಕಿಂಗ್ ಸ್ಟೈಲ್ ಬದಲಾಯಿಸು ಜೊತೆಗೆ ಆದಷ್ಟು ನಟನೆ ಚೆನ್ನಾಗಿ ಮಾಡಿಸು ಅಂತೆಲ್ಲಾ ನನಗೆ ಸಲಹೆ ನೀಡಿದ್ದರು. ಚಿತ್ರಕ್ಕಾಗಿ ಸುಮಲತಾ ಅಂಬರೀಶ್ ಕೂಡ ಒಳ್ಳೆಯ ಸಹಕಾರ ನೀಡಿದ್ದಾರೆ. ಸಿನಿಮಾದ ಆರಂಭದಲ್ಲೇ ಅಂಬಿಯ ಡೈಲಾಗ್ ನೋಡುಗರಿಗೆ ಸಖತ್ ಮಜಾ ನೀಡಲಿದೆ ಎಂದು ಭರವಸೆ ನೀಡಿದ್ರು ನಿರ್ದೇಶಕರು.
ಅಮರ್ ಚಿತ್ರದ ಹಾಡೊಂದಕ್ಕೆ ಕಾಲಿವುಡ್ನ ರಜಿನಿಕಾಂತ್, ಟಾಲಿವುಡ್ನ ಮೋಹನ್ ಬಾಬು, ಬಾಲಿವುಡ್ನ ಶತ್ರುಘ್ನ ಸಿನ್ಹಾ ಸೇರಿದಂತೆ ದೊಡ್ಡ ಸ್ಟಾರ್ಗಳನ್ನು ಒಟ್ಟುಗೂಡಿಸುವ ಆಸೆ ಅಂಬಿಯಣ್ಣನಿಗಿತ್ತು. ಆದರೆ, ಅವರೇ ನಮ್ಮನ್ನು ಅಗಲಿದ್ದರಿಂದ ಪ್ಲ್ಯಾನ್ ಎಲ್ಲಾ ಬದಲಾಯ್ತು. ಅಂಬರೀಶ್ ಅವರ ಜನ್ಮದಿನದ ಉಡುಗೊರೆಯಾಗಿ ಇದೇ ಮೇ 31 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಹರಸಿ ಅಂತಾ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ್ರು.
ಇನ್ನು ಸುದ್ದಿಗೋಷ್ಠಿಯಲ್ಲಿ ಅಭಿಷೇಕ್ ಅಂಬರೀಶ್, ತಾನ್ಯಾಹೋಪ್, ಸಂದೇಶ್ ನಾಗರಾಜ್, ಕ್ಯಾಮರಾ ಮ್ಯಾನ್ ಸತ್ಯ ಹೆಗ್ಡೆ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.