ಹರಿವು, ನಾತಿಚರಾಮಿ ಮತ್ತು ಆಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಂಸೋರೆ, ಅಖಿಲಾ ಎಂಬುವರ ಜೊತೆ ಸಪ್ತಪದಿ ತುಳಿದಿದ್ದಾರೆ. ತಲಘಟ್ಟಪುರ ಹತ್ತಿರದ ಶಿಬ್ರಾವಿ ಕೋರ್ಟ್ ಯಾರ್ಡ್ ರೆಸಾರ್ಟ್ ನಲ್ಲಿ ಬೆಳಗ್ಗೆ 6.30 ಗಂಟೆಯ ಶುಭ ಲಗ್ನದಲ್ಲಿ ಮಂಸೋರೆ ಅಖಿಲಾ ಜೊತೆ ಹಸೆಮಣೆ ಏರಿದ್ದಾರೆ. ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಆಹ್ವಾನಿಸದೆ ಕುಟುಂಬದವರು, ಚಿತ್ರರಂಗದವರು ಹಾಗೂ ಸ್ನೇಹಿತರು ಮದುವೆಗೆ ಸಾಕ್ಷಿಯಾಗಿದ್ದಾರೆ.
2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ 'ಹರಿವು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಂದಿತ್ತು. 'ಹರಿವು' ಚಿತ್ರದಲ್ಲಿ ಸಂಚಾರಿ ವಿಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು.
ಮಂಸೋರೆ ನಿರ್ದೇಶನದಲ್ಲಿ ಶೃತಿ ಹರಿಹರನ್ ಮತ್ತು ಸಂಚಾರಿ ವಿಜಯ್ ನಟಿಸಿ, 2018ರಲ್ಲಿ ಬಿಡುಗಡೆಯಾಗಿದ್ದ 'ನಾತಿಚರಾಮಿ' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ಎಂಬ ರಾಷ್ಟ್ರಪ್ರಶಸ್ತಿ, ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಮತ್ತು ಇತರೆ ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿದ್ದು, ಅದೇ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಗರಿ ಸಿಕ್ಕಿತ್ತು.