ಹರಿವು, ನಾತಿಚರಾಮಿ ಮತ್ತು ಆ್ಯಕ್ಟ್-1978 ಚಿತ್ರಗಳ ನಿರ್ದೇಶಕ, ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಮಂಸೋರೆ' ಅವರು ಇಂದು ಬೆಂಗಳೂರಿನಲ್ಲಿ ಅಖಿಲಾ ಅವರೊಂದಿಗೆ ನಿಶ್ಚಿತಾರ್ಥವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಕೋವಿಡ್ ಕಾರಣದಿಂದಾಗಿ ಕುಟುಂಬದವರು ಮತ್ತು ಕೆಲವು ಗೆಳೆಯರ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆದಿದ್ದು, ಆಗಸ್ಟ್ 15ಕ್ಕೆ ಮದುವೆ ಫಿಕ್ಸ್ ಮಾಡಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಆ್ಯಕ್ಟ್-1978 ಚಿತ್ರದ ನಂತರ ಕಡಲತೀರದ ವೀರರಾಣಿ ಅಬ್ಬಕ್ಕನ ಕುರಿತಾದ ರಾಣಿ ಅಬ್ಬಕ್ಕ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದ ಮಂಸೋರೆ, ಆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರು ಸಾಕಷ್ಟು ರಿಸರ್ಚ್ ನಡೆಸಿದ್ದು, ಪ್ಯಾನ್ ಇಂಡಿಯಾ ಚಿತ್ರ ಮಾಡುವುದು ಅವರ ಹೆಬ್ಬಯಕೆಯಂತೆ.
ಆದರೆ, ಸದ್ಯದ ಮಟ್ಟಿಗೆ ಅಷ್ಟೊಂದು ಹಣ ಹೂಡುವ ನಿರ್ಮಾಪಕರು ಸಿಗದ ಕಾರಣ, ಸೂಕ್ತ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದಾರೆ. ಅದಕ್ಕೂ ಮುನ್ನ ಇನ್ನೂ ಒಂದು ಸಣ್ಣ ಚಿತ್ರವನ್ನು ಅವರು ನಿರ್ದೇಶಿಸಿದರೂ ಆಶ್ಚರ್ಯವಿಲ್ಲ.
2014ರಲ್ಲಿ ಮಂಸೋರೆ ಅವರು ಮೊದಲು ನಿರ್ದೇಶಿಸಿದ 'ಹರಿವು' ಚಿತ್ರಕ್ಕೆ ಉತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ಈ ಚಿತ್ರದ ನಂತರ, ನಾತಿಚರಾಮಿ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರ ಮಟ್ಟದಲ್ಲಿ ಐದು ಪ್ರಶಸ್ತಿಗಳು ಬಂದಿದ್ದು ವಿಶೇಷ. ಅದರಲ್ಲೂ ಮಂಸೋರೆ ಅವರಿಗೆ ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು.
ಆ ನಂತರ, ಆ್ಯಕ್ಟ್ 1978 ಚಿತ್ರವನ್ನು ಕೈಗೆತ್ತಿಕೊಂಡ ಅವರು, ಸುದೀರ್ಘ ಲಾಕ್ಡೌನ್ ನಂತರ ಆ ಚಿತ್ರವನ್ನು ಕಳೆದ ವರ್ಷ ಬಿಡುಗಡೆ ಮಾಡಿದ್ದರು. ಸದ್ಯ ಮದುವೆ ಕೆಲಸದಲ್ಲಿ ಬ್ಯುಸಿಯಾಗಿರುವ ಮಂಸೋರೆ, ಮದುವೆ ಮುಗಿದ ಬಳಿಕೆ ಮುಂದಿನ ಚಿತ್ರದ ಘೋಷಣೆ ಮಾಡುವುದಕ್ಕೆ ಸಿದ್ಧತೆಗಳನ್ನು ನಡೆಸಿದ್ದಾರೆ.