ಹರಿವು, ನಾತಿಚರಾಮಿ, ಆ್ಯಕ್ಟ್-1978 ಎಂಬ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ಪ್ರತಿಭಾನ್ವಿತ ನಿರ್ದೇಶಕ ಮಂಸೋರೆ. ಆ್ಯಕ್ಟ್ 1978 ಸಿನಿಮಾ ಸಕ್ಸಸ್ ಬಳಿಕ ತುಳುನಾಡಿನ ಹೋರಾಟಗಾರ್ತಿ ರಾಣಿ ಅಬ್ಬಕ್ಕ ಜೀವನದ ಸಾಹಸಗಾಥೆಯನ್ನು ತೆರೆ ಮೇಲೆ ತರಲು ಸಜ್ಜಾಗಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರವನ್ನು ಮುಂದಕ್ಕೆ ಹಾಕಲಾಗಿದೆ. ಇದೀಗ ಹೊಸ ಕಥೆಯೊಂದಿಗೆ ನಿರ್ದೇಶಕ ಮಂಸೋರೆ ಹೊಸ ಚಿತ್ರದ ಟೈಟಲ್ ಅನ್ನು ಘೋಷಿಸಿದ್ದಾರೆ.
19.20.21 - ಹೊಸ ಸಿನಿಮಾದ ಟೈಟಲ್. ಈ ಸಿನಿಮಾದ ಕುರಿತಾಗಿ ಮಂಸೋರೆ ಸಾಮಾಜಿಕ ಜಾಲತಾಣದಲ್ಲಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ.
'ಸ್ನೇಹಿತರೇ ಹಾಗೂ ಸಿನಿಪ್ರಿಯರೇ..ನಾವು ಈ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದ ನನ್ನ ಬಹು ವರ್ಷಗಳ ಕನಸು ಅಬ್ಬಕ್ಕ ಸಿನಿಮಾ ಮಾಡುವ ಯೋಜನೆಯನ್ನು ಕೊರೊನಾ ಕಾಲದಲ್ಲಿ ಜರುಗುತ್ತಿರುವ ಅನಿಶ್ಚಿತತೆಗಳ ಕಾರಣದಿಂದ ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಮುಂದೆ ಸಮಯ ಕೈಗೂಡಿ ಬಂದಾಗ ಖಂಡಿತ ಅಬ್ಬಕ್ಕ ಸಿನಿಮಾ ತೆರೆಯ ಮೇಲೆ ತರುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ. ಮುಂದೆ? ಉತ್ತರ 19.20.21 ಚಿತ್ರ’ ಎಂದು ಅವರು ಬರಹ ಆರಂಭಿಸಿದ್ದಾರೆ.
ನಮಗೆ ಸಿನಿಮಾ ಬಿಟ್ಟು ಬೇರೆ ಜಗತ್ತು ತಿಳಿಯದು. ಸಿನಿಮಾನೇ ನಮ್ಮ ಜೀವನ. ಸಿನಿಮಾ ಕನಸು ಕಾಣದೇ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹಾಗಾಗಿ, ಅಬ್ಬಕ್ಕ ಸಿನಿಮಾ ಜೊತೆ ಜೊತೆಗೆ ಈ ಕೊರೊನಾ ಕಾಲದಲ್ಲಿ ವರ್ಷ ಪೂರ್ತಿ ಮನೆಯಲ್ಲೇ ಕಾಲ ಕಳೆಯುವಾಗ ಬಹಳ ಕಷ್ಟವೆನಿಸಿದರೂ, ಆ ಎರಡು ವರ್ಷಗಳಲ್ಲಿ ನಮಗೆ ಸಾಕಷ್ಟು ಹೋಮ್ ವರ್ಕ್ ಮಾಡಲು, ಕನಸುಗಳನ್ನು ಕಾಣಲು ಸಮಯವೂ ಸಿಕ್ಕಿತು. ಅದರ ಫಲವೇ ಈ ಹೊಸ ಸಿನಿಮಾ ಎಂದು ಮಂಸೋರೆ ಪೋಸ್ಟ್ ಮಾಡಿದ್ದಾರೆ.
ಹೊಸ ಪ್ರಯತ್ನವೊಂದರ ಬೆನ್ನತ್ತಿ ಹೊರಟಿದ್ದೇವೆ. ಆದರೆ ಇದು ಕನಸಲ್ಲ, ಕಥೆಯಲ್ಲ, ಸತ್ಯ ಘಟನೆ ಆಧಾರಿತ. ಬಹಳ ಹಿಂದೆಯೇ ಸಿನಿಮಾ ಮಾಡಬೇಕು ಅಂದುಕೊಂಡಿದ್ದ ಒಂದು ಘಟನೆಯು ದೃಶ್ಯರೂಪ ಪಡೆದುಕೊಳ್ಳಲು ಈಗ ಕಾಲ ಕೂಡಿ ಬಂದಿದೆ. ಈ ವರ್ಷವೇ ಸಿನಿಮಾನ ನಿಮ್ಮ ಮುಂದೆ ತರುವ ಆಶಯದೊಂದಿಗೆ, ಅತಿ ಶೀಘ್ರದಲ್ಲೇ ಚಿತ್ರೀಕರಣಕ್ಕೆ ಹೋಗುವ ಸಿದ್ಧತೆಯಲ್ಲಿದ್ದೇವೆ. ಹತ್ತೊಂಭತ್ತು, ಇಪ್ಪತ್ತು, ಇಪ್ಪತ್ತೊಂದು’ ಎಲ್ಲರ ಬದುಕಿಗೆ ಬಹಳ ಮುಖ್ಯವಾದ ಸಂಖ್ಯೆಗಳು. ಅದು ಏನು? ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳುವ ಕುತೂಹಲ ಸಿನಿಮಾ ನೋಡುವ ತನಕ ಉಳಿದಿರಲಿ.
ಇದನ್ನೂ ಓದಿ:'ಇಕ್ಕಟ್' ನಂತರ ಕಪ್ಪು ಸುಂದರಿಯಾದ ಬಿಗ್ ಬಾಸ್ನ ಭೂಮಿ ಶೆಟ್ಟಿ
ಆ್ಯಕ್ಟ್-1978 ಸಿನಿಮಾವನ್ನು ನಿರ್ಮಾಣ ಮಾಡಿದ್ದ ದೇವರಾಜ್ 19.20.21 ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಕ್ಯಾಮರಾಮ್ಯಾನ್ ಸತ್ಯ ಹೆಗಡೆ, ಸಂಭಾಷಣೆಕಾರ ವೀರೇಂದ್ರ ಮಲ್ಲಣ್ಣ ಕೂಡ ಟೀಮ್ನಲ್ಲಿ ಇದ್ದಾರೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂಬುದು ವಿಶೇಷ. ಸಿನಿಮಾದ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಕುರಿತಾಗಿ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ. ನಿಮ್ಮ ಪ್ರೀತಿಯ ಹಾರೈಕೆ ಮತ್ತು ಬೆಂಬಲದ ಆಶೀರ್ವಾದ ಸದಾ ನಮ್ಮೊಂದಿಗೆ ಇರಲಿ' ಎಂದು ಮಂಸೋರೆ ಬರೆದುಕೊಂಡಿದ್ದಾರೆ.