ಯುವರತ್ನ ಸಿನಿಮಾ ಬಳಿಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಜೇಮ್ಸ್ ಚಿತ್ರದ ಶೂಟಿಂಗ್ನಲ್ಲಿರುವ ಪುನೀತ್, ಅಭಿನಯ ಜೊತೆಗೆ ತಮ್ಮ ಪಿಆರ್‌ಕೆ ಪ್ರೊಡಕ್ಷನ್ ಹೌಸ್ ಮೂಲಕ ಅನೇಕ ಸಿನಿಮಾಗಳ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
ಫ್ರೆಂಚ್ ಬಿರಿಯಾನಿ ಚಿತ್ರದ ನಂತರ ಪಿಆರ್‌ಕೆ ಬ್ಯಾನರ್ನಡಿ ಮ್ಯಾನ್ ಆಫ್ ದಿ ಮ್ಯಾಚ್ ಹಾಗೂ ಫ್ಯಾಮಿಲಿ ಪ್ಯಾಕ್ ಸಿನಿಮಾಗಳು ತಯಾರಾಗಿದ್ದು, ಬಿಡುಗಡೆಗೆ ಸಜ್ಜಾಗಿವೆ. ಇನ್ನು ಪಿಆರ್‌ಕೆ ಬ್ಯಾನರ್ನಲ್ಲಿ ಹಲವು ಸಿನಿಮಾಗಳು ನಿರ್ಮಾಣಗೊಂಡು ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಆದರೆ, ತಮ್ಮದೇ ಹೋಂ ಬ್ಯಾನರ್ನಲ್ಲಿ ಪುನೀತ್ ರಾಜ್ ಕುಮಾರ್ ಇದುವರೆಗೂ ಒಂದು ಸಿನಿಮಾ ಮಾಡಿಲ್ಲ.ಇದೀಗ ಆ ಕಾಲ ಕೂಡಿ ಬಂದಿದೆ.
ಸ್ಯಾಂಡಲ್ ವುಡ್ನಲ್ಲಿ ಸವಾರಿ, ಪೃಥ್ವಿ ಹಾಗೂ ಚಂಬಲ್ನಂತಹ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿರುವ ನಿರ್ದೇಶಕ ಜೇಕಬ್ ವರ್ಗೀಸ್ ಜೊತೆ ಪುನೀತ್ ರಾಜ್ ಕುಮಾರ್ ಸಿನಿಮಾ ಮಾಡುವ ಕಾಲ ಬಂದಿದೆ. 2010ರಲ್ಲಿ ಬಿಡುಗಡೆಗೊಂಡ ಜೇಕಬ್ ನಿರ್ದೇಶನದ ಪೃಥ್ವಿ ಸಿನಿಮಾದಲ್ಲಿ ಪುನೀತ್, ಒಬ್ಬ ದಕ್ಷ ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದರು. ಚಿತ್ರ ಸೂಪರ್ ಹಿಟ್ ಆಗಿ ಪುನೀತ್ಗೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗಿತ್ತು.